ADVERTISEMENT

ಡಾ.ಕಫೀಲ್ ಸೇರಿ 80 ಮಂದಿ ‘ಹಿಸ್ಟರಿ ಶೀಟರ್‌‘ ಪಟ್ಟಿಗೆ ಸೇರ್ಪಡೆ

ಗೋರಖ್‌ಪುರ ಎಸ್‌ಎಸ್‌ಪಿ ಜೋಗೇಂದರ್ ಕುಮಾರ್ ಸೂಚನೆ ಮೇರೆಗೆ ಕ್ರಮ

ಪಿಟಿಐ
Published 31 ಜನವರಿ 2021, 6:19 IST
Last Updated 31 ಜನವರಿ 2021, 6:19 IST
ಡಾ. ಕಫೀಲ್ ಖಾನ್ (ಸಾಂದರ್ಭಿಕ ಚಿತ್ರ)
ಡಾ. ಕಫೀಲ್ ಖಾನ್ (ಸಾಂದರ್ಭಿಕ ಚಿತ್ರ)   

ಗೋರಖ್‌ಪುರ(ಉತ್ತರ ಪ್ರದೇಶ): ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧನಕ್ಕೊಳಗಾಗಿ, ನಂತರ ಬಿಡುಗಡೆಯಾಗಿರುವ ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯದ ಡಾ. ಕಫೀಲ್ ಖಾನ್ ಸೇರಿದಂತೆ 80 ಮಂದಿ ಇತರೆ ವ್ಯಕ್ತಿಗಳು ಅಪರಾಧ ಪ್ರಕರಣಗಳ ದೀರ್ಘ ಹಿನ್ನೆಲೆಯುಳ್ಳವರ ಪಟ್ಟಿಗೆ(ಹಿಸ್ಟರಿ ಶೀಟರ್‌) ಸೇರಿಸಲಾಗಿದ್ದು, ಇವರೆಲ್ಲರ ಮೇಲೆ ಪೊಲೀಸರು ನಿಗಾ ಇಟ್ಟಿರುತ್ತಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಿಸಿದ್ದಾರೆ.

ಹಿರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಜೋಗೇಂದ್ರ ಕುಮಾರ್ ಅವರ ಸೂಚನೆಯಂತೆ ಜಿಲ್ಲೆಯಲ್ಲಿರುವ 81 ಮಂದಿಯನ್ನು ದೀರ್ಘಕಾಲದ ಅಪರಾಧ ಹಿನ್ನೆಲೆಯುಳ್ಳವರ ಪಟ್ಟಿಗೆ ಸೇರಿಸಲಾಗಿದೆ. ಸದ್ಯ ಕ್ರಿಮಿನಲ್ ದಾಖಲೆಗಳ ಪ್ರಕಾರ ಜಿಲ್ಲೆಯಲ್ಲಿ 1543 ಇಂಥ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು ಇದ್ದಾರೆ.

ಜೂನ್ 8, 2020ರಂದು ಡಾ. ಕಫೀಲ್ ಅವರನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಲಾಗಿದೆ, ಆದರೆ, ಈ ಮಾಹಿತಿಯನ್ನು ಕಳೆದ ಶುಕ್ರವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಅವರ ಸಹೋದರ ಅಡೀಲ್ ಖಾನ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ADVERTISEMENT

ಶನಿವಾರ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಮಾತನಾಡಿರುವ ಕಫೀಲ್ ಖಾನ್, ‘ಉತ್ತರ ಪ್ರದೇಶ ಸರ್ಕಾರ ನನ್ನನ್ನು ದೀರ್ಘ ಕಾಲದ ಅಪರಾಧ ಹಿನ್ನೆಲೆಯುಳ್ಳವರ ಪಟ್ಟಿಗೆ ಸೇರಿಸಿದೆ. ಜೀವಮಾನ ಪೂರ್ತಿ ಪೊಲೀಸರು ನನ್ನನ್ನು ಮೇಲ್ವಿಚಾರಣೆ ಮಾಡುತ್ತಿರುತ್ತಾರೆ. ಇದೊಂದು ರೀತಿ ಒಳ್ಳೆಯದು. ನನ್ನ ಜತೆಗೆ ಇಬ್ಬರು ಭದ್ರತಾ ಸಿಬ್ಬಂದಿ ನಿಯೋಜಿಸಿದರೆ, ಅವರು ನನ್ನ ಮೇಲೆ 24 ಗಂಟೆಗಳ ಕಾಲ ಕಣ್ಣಿಟ್ಟಿರುತ್ತಾರೆ. ಕನಿಷ್ಠ, ನಕಲಿ ಪ್ರಕರಣಗಳಿಂದ ನನ್ನನ್ನು ನಾನು ಉಳಿಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ‘ ಎಂದು ಹೇಳಿದ್ದಾರೆ.‌

‘ಉತ್ತರ ಪ್ರದೇಶದಲ್ಲಿ ಅಪರಾಧಿಗಳ ಮೇಲೆ ನಿಗಾ ಇಡದಂತಹ ಪರಿಸ್ಥಿ ಇದೆ. ಆದರೆ, ಅಮಾಯಕ ವ್ಯಕ್ತಿಗಳನ್ನು ಹಿಸ್ಟರಿ ಶೀಟರ್‌ಗಳೆಂದು ಬಿಂಬಿಸಲಾಗುತ್ತಿದೆ‘ ಎಂದೂ ಅವರು ಆರೋಪಿಸಿದ್ದಾರೆ.

ಪೌರತ್ವ ವಿರೋಧಿ (ತಿದ್ದುಪಡಿ) ಕಾಯ್ದೆ (ಸಿಎಎ) ಕುರಿತು ಕಫೀಲ್ ಖಾನ್ ಅವರು 2019ರ ಡಿಸೆಂಬರ್ 10ರಂದು ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡಿದ್ದರು. ಇದಾದ ನಂತರ ಅವರನ್ನು ಜನವರಿ 2020 ಬಂಧಿಸಲಾಯಿತು. ಆನಂತರ ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಸೆಪ್ಟೆಂಬರ್ 1, 2020 ರಂದು, ಅಲಹಾಬಾದ್ ಹೈಕೋರ್ಟ್ ಎನ್ಎಸ್ಎ ಅಡಿಯಲ್ಲಿ ಖಾನ್ ಅವರ ಬಂಧನವನ್ನು ರದ್ದುಪಡಿಸಿತು. ಅವರನ್ನು ತಕ್ಷಣ ಬಿಡುಗಡೆ ಮಾಡಲು ಆದೇಶಿಸಿತ್ತು, ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (ಎಎಂಯು) ಅವರ ಭಾಷಣವು ದ್ವೇಷ ಅಥವಾ ಹಿಂಸೆಯನ್ನು ಉತ್ತೇಜಿಸಿರಲಿಲ್ಲ ಎಂದು ನ್ಯಾಯಾಲಯ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.