ನವದೆಹಲಿ: ಕೈಗಾ ಪರಮಾಣು ವಿದ್ಯುತ್ ಸ್ಥಾವರ ಸಂಪರ್ಕಿಸುವ ರಸ್ತೆಯ ವಿಸ್ತರಣೆಗೆ 12 ಎಕರೆ ಅರಣ್ಯ ಕೋರಿರುವ ಪ್ರಸ್ತಾವದ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು (ಎನ್‌ಟಿಸಿಎ) ರಾಜ್ಯ ಅರಣ್ಯ ಇಲಾಖೆಗೆ ಪತ್ರ ಬರೆದಿದೆ.
ಕೈಗಾ-ಬಾರೆ ರಸ್ತೆಯ ವಿಸ್ತರಣೆಯ ಪ್ರಸ್ತಾವವನ್ನು ಭಾರತೀಯ ಪರಮಾಣು ವಿದ್ಯುತ್ ನಿಗಮಕ್ಕೆ ಸಲ್ಲಿಸಿತ್ತು. ರಸ್ತೆ ವಿಸ್ತರಣೆಯಿಂದಾಗಿ ಅಳಿವಿನಂಚಿನಲ್ಲಿರುವ ಪ್ರಾಣಿಗಳಿಗೆ ತೊಂದರೆಯಾಗಲಿದ್ದು, ಈ ಬಗ್ಗೆ ಸಮಗ್ರ ಪರಿಶೀಲನೆಯ ಅಗತ್ಯ ಇದೆ ಎಂದು ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ್ ಕುಲಕರ್ಣಿ ಅವರು ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು.
ಈ ಪ್ರದೇಶವು ಹುಲಿ ಕಾರಿಡಾರ್ ವ್ಯಾಪ್ತಿಯಲ್ಲಿದೆ ಮತ್ತು ಕಾಳಿ ಹುಲಿ ಅಭಯಾರಣ್ಯಕ್ಕೆ ಬಹಳ ಹತ್ತಿರದಲ್ಲಿದೆ ಎಂದು ಅವರು ಗಮನ ಸೆಳೆದಿದ್ದರು. ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯು ತನ್ನ 55 ನೇ ಸಭೆಯಲ್ಲಿ ಸ್ಥಾವರ ವಿಸ್ತರಣೆಗೆ ಯಾವುದೇ ಅರಣ್ಯ ಭೂಮಿ ಬಳಸಬಾರದು ಎಂಬ ಷರತ್ತಿಗೆ ಒಳಪಟ್ಟು ಈ ಯೋಜನೆಯನ್ನು ಶಿಫಾರಸು ಮಾಡಿತ್ತು ಎಂದು ಗಿರಿಧರ್ ಪತ್ರದಲ್ಲಿ ಹೇಳಿದ್ದರು.
ಈ ಬಗ್ಗೆ ವನ್ಯಜೀವಿ ವಾರ್ಡನ್ (ಪಿಸಿಸಿಎಫ್) ಅವರಿಗೆ ಪತ್ರ ಬರೆದಿರುವ ಪ್ರಾಧಿಕಾರದ ಸಹಾಯಕ ಮಹಾನಿರ್ದೇಶಕಿ ಹರಿಣಿ ವೇಣುಗೋಪಾಲ್, ‘ಈ ಬಗ್ಗೆ ಶೀಘ್ರದಲ್ಲಿ ವಾಸ್ತವಾಂಶದ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.