ನವದೆಹಲಿ: ಕೈಲಾಸ ಮಾನಸ ಸರೋವರ ಯಾತ್ರೆಯು ಜೂನ್ ತಿಂಗಳಿನಿಂದ ಪುನರಾರಂಭವಾಗಲಿದೆ ಎಂದು ಭಾರತ ಮತ್ತು ಚೀನಾ ತಿಳಿಸಿವೆ.
ಈ ಮೂಲಕ ಸುಮಾರು ಐದು ವರ್ಷಗಳ ಬಳಿಕ ಮತ್ತೆ ಯಾತ್ರೆ ಆರಂಭವಾಗುವ ನಿರೀಕ್ಷೆ ಇದೆ. ಪೂರ್ವ ಲಡಾಖ್ ಗಡಿ ಬಿಕ್ಕಟ್ಟಿನಿಂದಾಗಿ ಹಳಸಿದ್ದ ಉಭಯ ದೇಶಗಳ ಸಂಬಂಧವನ್ನು ಮತ್ತೆ ಯಥಾಸ್ಥಿತಿಯತ್ತ ಕೊಂಡೊಯ್ಯುವ ಯತ್ನ ಇದಾಗಿದೆ.
ಕೈಲಾಸ ಮಾನಸ ಸರೋವರ ಯಾತ್ರೆಯನ್ನು ವಿದೇಶಾಂಗ ಇಲಾಖೆಯು ಆಯೋಜಿಸಲಿದೆ. ಜೂನ್‌ನಲ್ಲಿ ಆರಂಭವಾಗಿ ಆಗಸ್ಟ್‌ನಲ್ಲಿ ಅಂತ್ಯವಾಗಲಿರುವ ಯಾತ್ರೆಯು ಉತ್ತರಾಖಂಡದ ಲಿಪುಲೇಖ ಸಂಧಿ ಮತ್ತು ಸಿಕ್ಕಿಂನ ನಾಥೂ ಲಾ ಮಾರ್ಗಗಳ ಮೂಲಕ ಆರಂಭವಾಗಲಿದೆ ಎಂದು ಭಾರತದ ವಿದೇಶಾಂಗ ಇಲಾಖೆ ತಿಳಿಸಿದೆ.
ಚೀನಾದ ಟಿಬೆಟ್ ಸ್ವಾಯತ್ತ ಪ್ರಾಂತ್ಯದಲ್ಲಿರುವ ಮಾನಸ ಸರೋವರ ಕೆರೆ ಮತ್ತು ಕೈಲಾಸ ಬೆಟ್ಟವು ಹಿಂದೂಗಳು, ಜೈನರು ಮತ್ತು ಬೌದ್ಧರ ಧಾರ್ಮಿಕ ಕ್ಷೇತ್ರವಾಗಿದೆ.
kmy.gov.in ವೆಬ್‌ಸೈಟ್ ಮೂಲಕ ಯಾತ್ರಾರ್ಥಿಗಳು ಅರ್ಜಿ ಸಲ್ಲಿಸಬಹುದು. ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ, ಲಿಂಗ ಸಮಾನತೆ ಆಧಾರದ ಮೇರೆಗೆ ಯಾತ್ರಾರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಇಲಾಖೆ ತಿಳಿಸಿದೆ.
2020ರಲ್ಲಿ ಮೊದಲಿಗೆ ಕೋವಿಡ್ ಕಾರಣಕ್ಕೆ ಯಾತ್ರೆ ರದ್ದುಗೊಳಿಸಲಾಗಿತ್ತು. ಆ ಬಳಿಕ ಪೂರ್ವ ಲಡಾಖ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆಗೆ ಸಂಬಂಧಿಸಿದಂತೆ ಉಭಯ ದೇಶಗಳ ಮಧ್ಯೆ ಸೇನಾ ಬಿಕ್ಕಟ್ಟು ಉದ್ಭವಿಸಿತ್ತು. ಇದರಿಂದಾಗಿ ಮಾನಸ ಸರೋವರ ಯಾತ್ರೆ ಮೇಲಿನ ರದ್ದು ಮುಂದುವರಿದಿತ್ತು.
ಡೆಮ್‌ಚೊಕ್ ಮತ್ತು ಡೆಪ್ಸಾಂಗ್‌ನಲ್ಲಿ ನಿಯೋಜಿಸಲಾಗಿದ್ದ ಸೇನೆಯನ್ನು ಕಳೆದ ವರ್ಷದ ಅಕ್ಟೋಬರ್ 21ರಂದು ಉಭಯ ದೇಶಗಳು ಹಿಂಪಡೆದಿವೆ.
ಇದಾಗಿ ಎರಡು ದಿನಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು, ರಷ್ಯಾದಲ್ಲಿ ಭೇಟಿಯಾಗಿ ಹಲವು ದ್ವಿಪಕ್ಷೀಯ ಸಂಬಂಧ ಸುಧಾರಣೆ ಬಗ್ಗೆ ಚರ್ಚಿಸಿದ್ದರು. ಇದರ ಭಾಗವಾಗಿ ಕಳೆದ ಕೆಲವು ತಿಂಗಳುಗಳಿಂದ ದ್ವಿಪಕ್ಷೀಯ ಸಂಬಂಧವನ್ನು ಯಥಾಸ್ಥಿತಿಗೆ ತರಲು ಉಭಯ ದೇಶಗಳು ಮಾತುಕತೆ ನಡೆಸಿದ್ದವು.
ಇದೇ ವರ್ಷದ ಜನವರಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಚೀನಾದ ವಿದೇಶಾಂಗ ಕಾರ್ಯದರ್ಶಿಯೊಂದಿಗೆ ಚೀನಾದಲ್ಲಿ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆ ಮತ್ತೆ ಆರಂಭಿಸಲು ಉಭಯ ದೇಶಗಳು ಒಪ್ಪಿಕೊಂಡಿದ್ದವು. ಅಲ್ಲದೆ, ಸಂಬಂಧವನ್ನು ಮರು ಸ್ಥಾಪಿಸಲು ಮತ್ತು ಸ್ಥಿರಗೊಳಿಸಲು ಜನರ ಕೇಂದ್ರಿತವಾದ ಕ್ರಮಗಳನ್ನು ಕೈಗೊಳ್ಳಲು ಸಮ್ಮಿತಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.