ADVERTISEMENT

ಬಾಬರಿ ಮಸೀದಿ ಧ್ವಂಸಕ್ಕೆ ಸಾಕ್ಷಿಯಾಗಿದ್ದ ಕಲ್ಯಾಣ್ ಸಿಂಗ್‌

ಪಿಟಿಐ
Published 22 ಆಗಸ್ಟ್ 2021, 1:56 IST
Last Updated 22 ಆಗಸ್ಟ್ 2021, 1:56 IST
ಕಲ್ಯಾಣ್ ಸಿಂಗ್ (ಪಿಟಿಐ ಸಂಗ್ರಹ ಚಿತ್ರ)
ಕಲ್ಯಾಣ್ ಸಿಂಗ್ (ಪಿಟಿಐ ಸಂಗ್ರಹ ಚಿತ್ರ)   

ಲಖನೌ: 1992ರ ಡಿಸೆಂಬರ್‌ 6ರಂದು ಬಾಬರಿ ಮಸೀದಿ ಧ್ವಂಸ ಸಮಯದಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಮೊದಲ ಮುಖ್ಯಮಂತ್ರಿಯಾಗಿದ್ದವರು ಕಲ್ಯಾಣ್ ಸಿಂಗ್. ಆ ದಿನ ಅವರ ಜೀವನದಲ್ಲಿ ನಿರ್ಣಾಯಕ ಘಟ್ಟವಾಗಿತ್ತು.

ಕರ ಸೇವಕರು ಮಸೀದಿಯನ್ನು ಧ್ವಂಸಗೊಳಿಸಿದ ನಂತರ ಘಟನೆಯ ನೈತಿಕ ಹೊಣೆ ಹೊತ್ತು ಸಿಂಗ್‌ ಅವರು ರಾಜೀನಾಮೆ ನೀಡಿದ್ದರು.

‘ನಾನು ಮುಖ್ಯಮಂತ್ರಿ ಆದ ಸಂದರ್ಭದಲ್ಲಿಯೇ ಮಸೀದಿ ಧ್ವಂಸ ಆಗಿದ್ದು, ವಿಧಿಲಿಖಿತವಾಗಿತ್ತು ಎನಿಸುತ್ತದೆ’ ಎಂದು ಕಳೆದ ವರ್ಷ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಸಂದರ್ಭದಲ್ಲಿ ಪತ್ರಕರ್ತರಿಗೆ ಅವರು ಹೇಳಿದ್ದರು. ಮಸೀದಿ ಧ್ವಂಸ ಪ್ರಕರಣದಲ್ಲಿ ಅವರು ವಿಚಾರಣೆಯನ್ನು ಎದುರಿಸುತ್ತಿದ್ದರು. ರಾಮ ಮಂದಿರ ನಿರ್ಮಾಣವಾಗುವವರೆಗೂ ಬದುಕಿರಬೇಕು ಎಂಬುದು ಅವರ ಕೊನೆಯ ಆಸೆಯಾಗಿತ್ತು.

ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಅವರ ಆಡಳಿತ ಚಾಣಾಕ್ಷತೆಗಾಗಿ ಹಲವರ ಮೆಚ್ಚುಗೆ ಗಳಿಸಿದ್ದರು. ಉತ್ತರ ಪ್ರದೇಶದ ಪಶ್ಚಿಮ ಭಾಗದ ಹಿಂದುಳಿದ ಜಾತಿಯ ಪ್ರಭಾವಿ ನಾಯಕರಾಗಿದ್ದ ಸಿಂಗ್‌, ಎರಡು ಬಾರಿ ಬಿಜೆಪಿಯಿಂದ ದೂರವಾಗಿದ್ದರು.

1999ರಲ್ಲಿ ಬಿಜೆಪಿ ತೊರೆದಿದ್ದ ಇವರು 2004ರಲ್ಲಿ ಮತ್ತೆ ವಾಪಸ್ಸಾಗಿದ್ದರು. 2009ರಲ್ಲೂ ಪಕ್ಷ ತೊರೆದು ಪುನಃ ಸೇರ್ಪಡೆಗೊಂಡಿದ್ದರು.

1932ರ ಜನವರಿ 5ರಂದು ಜನಿಸಿದ ಕಲ್ಯಾಣ್‌ ಸಿಂಗ್‌, 1967ರಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದರು. ಬಿಜೆಪಿಯಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.