ADVERTISEMENT

ಚುನಾವಣೆಗೂ ಮುನ್ನ ಕಮಲ್‌ ಹಾಸನ್‌ಗೆ ಹಿನ್ನಡೆ; ಪಕ್ಷದ ಪ್ರಮುಖರು ಬಿಜೆಪಿ ಸೇರ್ಪಡೆ

ಏಜೆನ್ಸೀಸ್
Published 26 ಡಿಸೆಂಬರ್ 2020, 4:47 IST
Last Updated 26 ಡಿಸೆಂಬರ್ 2020, 4:47 IST
ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಾತನಾಡಿದರು (ಟ್ವಿಟರ್‌ ಚಿತ್ರ)
ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಾತನಾಡಿದರು (ಟ್ವಿಟರ್‌ ಚಿತ್ರ)   

ಚೆನ್ನೈ: 2021ರ ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನ ಮಕ್ಕಳ್ ನೀಧಿ ಮಯ್ಯಂ (ಎಂಎನ್‌ಎಂ) ಪಕ್ಷದ ಸಂಸ್ಥಾಪಕ, ನಟ ಕಮಲ್‌ ಹಾಸನ್‌ಗೆ ಹಿನ್ನಡೆಯಾಗಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ಎ.ಅರುಣಾಚಲಂ ಅವರು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಅರುಣಾಚಲಂ ಅವರು ಟ್ಯುಟಿಕೋರಿನ್ ಜಿಲ್ಲೆಯವರಾಗಿದ್ದಾರೆ. ಕಮಲ್‌ ಹಾಸನ್‌ ಮುಂಬರುವ ವಿಧಾನಸಭಾ ಚುನಾವಣೆಗೆ ಪ್ರಚಾರ ನಡೆಸುತ್ತಿರುವ ಸಂದರ್ಭದಲ್ಲಿ ಅರುಣಾಚಲಂ ಪಕ್ಷ ತೊರೆದಿರುವುದು ಎಂಎನ್‌ಎಂಗೆ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.

ADVERTISEMENT

ಚೆನ್ನೈನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಪ್ರಕಾಶ್ ಜಾವಡೇಕರ್, ‘ತಮಿಳುನಾಡಿನಲ್ಲಿ ಬಿಜೆಪಿ ಅದ್ಭುತ ಪ್ರದರ್ಶನ ನೀಡುತ್ತದೆ ಎಂದು ನನಗೆ ವಿಶ್ವಾಸವಿದೆ. ದೇಶದಾದ್ಯಂತ ಅನೇಕ ಪಕ್ಷಗಳು ಕುಟುಂಬ ಪಕ್ಷವನ್ನು ಹೊಂದಿವೆ. ಆದರೆ, ನಮಗೆ ನಮ್ಮ ಪಕ್ಷವೇ ಒಂದು ಕುಟುಂಬವಿದ್ದಂತೆ. ನಾವು ಚುನಾವಣೆಯಲ್ಲಿ ಸಾರ್ವತ್ರಿಕ ಪ್ರದರ್ಶನ ನೀಡುತ್ತೇವೆ’ ಎಂದು ತಿಳಿಸಿದ್ದಾರೆ.

‘ಗ್ರೇಟರ್‌ ಹೈದರಾಬಾದ್‌ ಮುನ್ಸಿಪಲ್‌ ಕಾರ್ಪೊರೇಷನ್‌’ (ಜಿಎಚ್‌ಎಂಸಿ) ಚುನಾವಣೆಯಲ್ಲಿ ನಾವು ಈ ಹಿಂದೆ ಕೇವಲ ನಾಲ್ಕು ಸ್ಥಾನಗಳನ್ನು ಪಡೆದಿದ್ದೇವು. ಆದರೆ, ಈ ಬಾರಿ 48 ಸ್ಥಾನಗಳನ್ನು ಪಡೆದಿದ್ದೇವೆ. ಉತ್ತರ ಪ್ರದೇಶ, ಗುಜರಾತ್‌ನಲ್ಲಿ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇವೆ. ಇತ್ತೀಚೆಗೆ ಜಮ್ಮು ಜಿಲ್ಲೆಯಲ್ಲಿ ನಡೆದ ಮೊದಲ ಜಿಲ್ಲಾ ಅಭಿವೃದ್ಧಿ ಮಂಡಳಿ(ಡಿಡಿಸಿ) ಚುನಾವಣೆಯಲ್ಲಿ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ತಮಿಳುನಾಡಿನಲ್ಲೂ ನಾವು ಉತ್ತಮ ಪ್ರದರ್ಶನ ನೀಡುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.