ADVERTISEMENT

ಮಧ್ಯಪ್ರದೇಶ ಸಿ.ಎಂ ಸೋದರಳಿಯ ಪುರಿ ಬಂಧನ

ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿದ್ದ ಇ.ಡಿ

ಪಿಟಿಐ
Published 20 ಆಗಸ್ಟ್ 2019, 20:00 IST
Last Updated 20 ಆಗಸ್ಟ್ 2019, 20:00 IST
ಬ್ಯಾಂಕ್‌ ಸಾಲ ಪಡೆದು ವಂಚನೆ, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿರುವ ಉದ್ಯಮಿ ರತುಲ್‌ ಪುರಿ (ಎಡದಿಂದ ಮೊದಲನೆಯವರು) ಅವರನ್ನು ನವದೆಹಲಿಯ ಇ.ಡಿ ಕಚೇರಿಯಲ್ಲಿ ಮಂಗಳವಾರ ತನಿಖೆಗೆ ಒಳಪಡಿಸಲಾಯಿತು –ಪಿಟಿಐ ಚಿತ್ರ
ಬ್ಯಾಂಕ್‌ ಸಾಲ ಪಡೆದು ವಂಚನೆ, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿರುವ ಉದ್ಯಮಿ ರತುಲ್‌ ಪುರಿ (ಎಡದಿಂದ ಮೊದಲನೆಯವರು) ಅವರನ್ನು ನವದೆಹಲಿಯ ಇ.ಡಿ ಕಚೇರಿಯಲ್ಲಿ ಮಂಗಳವಾರ ತನಿಖೆಗೆ ಒಳಪಡಿಸಲಾಯಿತು –ಪಿಟಿಐ ಚಿತ್ರ   

ನವದೆಹಲಿ : ಬ್ಯಾಂಕಿಗೆ ವಂಚನೆ, ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದ ಮತ್ತೊಂದು ಪ್ರಕರಣವೊಂದರಲ್ಲಿ ಉದ್ಯಮಿ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್‌ ಅವರ ಸೋದರಳಿಯ ರತುಲ್‌ ಪುರಿ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಮಂಗಳವಾರ ಇಲ್ಲಿ ಬಂಧಿಸಿದ್ದಾರೆ.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಪುರಿ ಅವರನ್ನು ಇ.ಡಿ ಅಧಿಕಾರಿಗಳು ಸೋಮವಾರ ರಾತ್ರಿ ವಶಕ್ಕೆ ಪಡೆದಿದ್ದರು. ಮಂಗಳವಾರ ಅವರನ್ನು ಇಲ್ಲಿನ ವಿಶೇಷ ಕೋರ್ಟ್‌ ಮುಂದೆ ಹಾಜರುಪಡಿಸಲಾಯಿತು.

ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಸಾಲ ಪಡೆದು, ಬ್ಯಾಂಕಿಗೆ ವಂಚಿಸಿದ್ದಕ್ಕಾಗಿ ರತುಲ್ ಪುರಿ, ತಂದೆ ದೀಪಕ್‌ ಪುರಿ, ತಾಯಿ ನೀತಾ (ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್‌ ಅವರ ಸಹೋದರಿ) ಹಾಗೂ ಇತರರ ವಿರುದ್ಧ ಸಿಬಿಐ ಆಗಸ್ಟ್‌ 17ರಂದು ಪ್ರಕರಣ ದಾಖಲಿಸಿತ್ತು. ಪುರಿ ಕುಟುಂಬಕ್ಕೆ ಸೇರಿದ ವಿವಿಧ ಸ್ಥಳಗಳಲ್ಲಿ ಸಿಬಿಐ ಭಾನುವಾರ ಶೋಧ ಕಾರ್ಯ ಕೈಗೊಂಡಿತ್ತು.

ADVERTISEMENT

ಪ್ರಕರಣ ಏನು?: ಪುರಿ ಕುಟುಂಬದ ಸದಸ್ಯರಲ್ಲದೇ, ಸಂಜಯ್‌ ಜೈನ್‌, ವಿನೀತ್‌ ಶರ್ಮಾ ಎಂಬುವವರು ಮೋಸರ್‌ ಬೇಯರ್‌ ಇಂಡಿಯಾ ಲಿಮಿಟೆಡ್‌ (ಎಂಬಿಐಎಲ್‌) ಎಂಬ ಕಂಪನಿ ಸ್ಥಾಪಿಸಿದ್ದರು. ಸಿ,ಡಿ, ಡಿ.ವಿ.ಡಿ ಸೇರಿದಂತೆ ಕಂಪ್ಯೂಟರ್‌ಗೆ ಸಂಬಂಧಿಸಿದ ಸಾಧನಗಳನ್ನು ಈ ಕಂಪನಿ ತಯಾರಿಸುತ್ತಿತ್ತು. ರತುಲ್‌ ಪುರಿ ಈ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದರು. ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದ ಕಂಪನಿಯ ಆಡಳಿತ ಮಂಡಳಿ, ಅದನ್ನು ಮರುಪಾವತಿಸದೇ ವಂಚಿಸಿದೆ ಎಂದು ದೂರಲಾಗಿದೆ.

‘ಎಂಬಿಐಎಲ್‌ನಿಂದ ಬ್ಯಾಂಕಿಗೆ ₹354.51 ಕೋಟಿ ನಷ್ಟ ಉಂಟಾಗಿದೆ’ ಎಂದು ಬ್ಯಾಂಕ್‌ ನೀಡಿದ ದೂರಿನನ್ವಯ ಇ.ಡಿ, ಸಿಬಿಐ ಹಾಗೂ ಐ.ಟಿ ಇಲಾಖೆಗಳು ತನಿಖೆ ಕೈಗೊಂಡಿದ್ದವು.

ಇ.ಡಿ ಅರ್ಜಿ: ಆದೇಶ ಕಾಯ್ದಿರಿಸಿದ ಕೋರ್ಟ್‌

ಆಗಸ್ಟಾವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಹಗರಣದಲ್ಲಿ ಹಣ ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿಯೂ ಆಗಿರುವ ರತುಲ್‌ ಪುರಿ ಅವರನ್ನು ವಿಚಾರಣೆಗಾಗಿ ತನ್ನ ವಶಕ್ಕೆ ನೀಡುವಂತೆ ಇ.ಡಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಕೋರ್ಟ್‌ನ ವಿಶೇಷ ನ್ಯಾಯಾಧೀಶ ಅರವಿಂದ ಕುಮಾರ್‌ ಮಂಗಳವಾರ ಆದೇಶವನ್ನು ಕಾಯ್ದಿರಿಸಿದರು.

ಎರಡೂ ಕಡೆಯ ವಾದ ಆಲಿಸಿದ ನಂತರ ಆದೇಶ ನೀಡುವುದಾಗಿ ಹೇಳಿದರು.

ತಿರಸ್ಕೃತ: ಇನ್ನೊಂದೆಡೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಸುನಿಲ್‌ ಗೌರ್‌ ಮಂಗಳವಾರ ತಿರಸ್ಕರಿಸಿದ್ದಾರೆ. ಪುರಿ ಅರ್ಜಿಯನ್ನು ತಿರಸ್ಕರಿಸುವಂತೆ ಇ.ಡಿ ಮನವಿ ಮಾಡಿತ್ತು.

***

"ಹಣ ಅಕ್ರಮ ವರ್ಗಾವಣೆ ಆರೋಪದ ಮೇಲೆ ನನ್ನ ಸೋದರಳಿಯ, ಉದ್ಯಮಿ ರತುಲ್‌ ಪುರಿಯನ್ನು ಇ.ಡಿ ಬಂಧಿಸಿರುವುದು ದುರುದ್ದೇಶದಿಂದ ಕೂಡಿದ ನಡೆ "

- ಕಮಲ್‌ನಾಥ್‌,ಮಧ್ಯಪ್ರದೇಶ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.