ADVERTISEMENT

ವಿವಾದಗಳ ‘ರಾಣಿ’ ಕಂಗನಾ: ಸಚಿವ ವಿಕ್ರಮಾದಿತ್ಯ ಸಿಂಗ್

ಪಿಟಿಐ
Published 8 ಏಪ್ರಿಲ್ 2024, 14:28 IST
Last Updated 8 ಏಪ್ರಿಲ್ 2024, 14:28 IST
<div class="paragraphs"><p>ಹಿಮಾಚಲ ಪ್ರದೇಶದ ಲೋಕೋಪಯೋಗಿ ಸಚಿವ ವಿಕ್ರಮಾದಿತ್ಯ ಸಿಂಗ್ ಪಿಟಿಐ ಚಿತ್ರ</p></div>

ಹಿಮಾಚಲ ಪ್ರದೇಶದ ಲೋಕೋಪಯೋಗಿ ಸಚಿವ ವಿಕ್ರಮಾದಿತ್ಯ ಸಿಂಗ್ ಪಿಟಿಐ ಚಿತ್ರ

   

ಶಿಮ್ಲಾ: ಹಿಮಾಚಲ ಪ್ರದೇಶದ ಲೋಕೋಪಯೋಗಿ ಸಚಿವ ವಿಕ್ರಮಾದಿತ್ಯ ಸಿಂಗ್ ಅವರು ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ ಅವರನ್ನು ‘ವಿವಾದಗಳ ರಾಣಿ’ ಎಂದು ಹೇಳಿದ್ದಾರೆ.

‘ಕಂಗನಾ ಉತ್ತಮ ನಟಿ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಅವರು ‘ವಿವಾದಗಳ ರಾಣಿ’ ಎನ್ನುವುದನ್ನು ಕೂಡ ನಾವು ಮರೆಯಬಾರದು. ಅದರ ಬಗ್ಗೆ ಅವರು ಚಿಂತಿಸಿದರೆ ಮತ್ತು ಕಾಲದಿಂದ ಕಾಲಕ್ಕೆ ಅವರು ಹೇಳಿದ ಮಾತುಗಳು ಚುನಾವಣೆಯಲ್ಲಿ ಉಲ್ಲೇಖವಾಗದಿದ್ದರೆ, ಆಗ ಆಕೆಗೆ ಜೈ ಶ್ರೀರಾಮ್ ಹೇಳುತ್ತೇನೆ’ ಎಂದು ಸೋಮವಾರ ಮಾಧ್ಯಮಗಳಿಗೆ ತಿಳಿಸಿದರು.

ADVERTISEMENT

‘ಲೋಕಸಭಾ ಚುನಾವಣೆಯಲ್ಲಿ ಎಲ್ಲ ವಿಚಾರಗಳನ್ನೂ ಪ್ರಸ್ತಾಪಿಸಲಾಗುತ್ತದೆ ಮತ್ತು ಕಂಗನಾ ಹಿಮಾಚಲ ಪ್ರದೇಶದ ಜನರಿಗೆ ಉತ್ತರಿಸಬೇಕಾಗುತ್ತದೆ’ ಎಂದಿದ್ದಾರೆ.

ವಿಕ್ರಮಾದಿತ್ಯ ಸಿಂಗ್, ಮಂಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿಯಾಗಿದ್ದಾರೆ. ಅವರು ಅಥವಾ ಅವರ ತಾಯಿ ಪ್ರತಿಭಾ ಸಿಂಗ್ ಮಂಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. ಪ್ರತಿಭಾ, ಮಂಡಿ ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ.

‘ನಾನು ಗೋಮಾಂಸ ಸೇವಿಸುವುದಿಲ್ಲ’

ತಾನು ಗೋಮಾಂಸ ತಿನ್ನುತ್ತೇನೆ ಎನ್ನುವ ಆರೋಪದ ಬಗ್ಗೆ ‘ಎಕ್ಸ್‌’ ವೇದಿಕೆಯಲ್ಲಿ ಪ್ರತಿಕ್ರಿಯಿಸಿರುವ ಕಂಗನಾ ರನೌತ್ ‘ನನ್ನ ಬಗ್ಗೆ ಆಧಾರರಹಿತ ಗಾಳಿಸುದ್ದಿಗಳನ್ನು ಹರಡುತ್ತಿರುವುದು ನಾಚಿಕೆಗೇಡು. ಜನರಿಗೆ ನನ್ನ ಬಗ್ಗೆ ಗೊತ್ತಿದೆ. ನಾನು ಹೆಮ್ಮೆಯ ಹಿಂದು ಎನ್ನುವುದನ್ನು ಅರಿತಿರುವ ಅವರನ್ನು ಯಾವುದೇ ಕಾರಣಕ್ಕೂ ದಾರಿ ತಪ್ಪಿಸಲಾಗದು. ನಾನು ಗೋಮಾಂಸವನ್ನಾಗಲಿ ಯಾವುದೇ ರೀತಿಯ ರೆಡ್‌ ಮೀಟ್ ಸೇವಿಸುವುದಿಲ್ಲ’ ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಕ್ರಮಾದಿತ್ಯ ಸಿಂಗ್ ‘ನಾನು ಕಂಗನಾಗೆ ಬುದ್ಧಿ ಕೊಡುವಂತೆ ಶ್ರೀರಾಮನಲ್ಲಿ ಪ್ರಾರ್ಥಿಸುತ್ತೇನೆ. ರಾಜ್ಯದ ಜನರ ಬಗ್ಗೆ ಏನೂ ಗೊತ್ತಿಲ್ಲದ ಕಂಗನಾ ಚುನಾವಣೆಯಲ್ಲಿ ಗೆಲ್ಲುವುದಿಲ್ಲವಾದ್ದರಿಂದ ‘ದೇವಭೂಮಿ’ಯಾದ ಹಿಮಾಚಲದಿಂದ ಅವರು ಬಾಲಿವುಡ್‌ಗೆ ಪರಿಶುದ್ಧರಾಗಿ ಹಿಂದಿರುಗಲಿ ಎಂಬುದಾಗಿ ಹಾರೈಸುತ್ತೇನೆ’ ಎಂದು ಹೇಳಿದರು.          

ಕಂಗನಾ ರನೌತ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.