ADVERTISEMENT

ಪಕ್ಷದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸದ ನಾಯಕತ್ವ: ಕಪಿಲ್‌ ಸಿಬಲ್ ಕಿಡಿ‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ನವೆಂಬರ್ 2020, 7:02 IST
Last Updated 16 ನವೆಂಬರ್ 2020, 7:02 IST
ಕಾಂಗ್ರೆಸ್‌ ಹಿರಿಯ ನಾಯಕ ಕಪಿಲ್‌ ಸಿಬಲ್‌
ಕಾಂಗ್ರೆಸ್‌ ಹಿರಿಯ ನಾಯಕ ಕಪಿಲ್‌ ಸಿಬಲ್‌    

ನವದೆಹಲಿ: ಪಕ್ಷವು ಎದುರಿಸುತ್ತಿರುವ ಸಮಸ್ಯೆಗಳನ್ನು ಕಾಂಗ್ರೆಸ್‌ ನಾಯಕತ್ವ ಗಂಭೀರವಾಗಿ ಪರಿಗಣಿಸುತ್ತಿಲ್ಲವೆಂದು ಹಿರಿಯ ನಾಯಕ ಕಪಿಲ್‌ ಸಿಬಲ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ಇಂಡಿಯನ್‌ ಎಕ್ಸ್‌ಪ್ರೆಸ್‌' ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, 'ಪಕ್ಷವು ಎದುರಿಸುತ್ತಿರುವ ಸಮಸ್ಯೆಗಳನ್ನು ಕಾಂಗ್ರೆಸ್‌ ನಾಯಕತ್ವ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕಾಂಗ್ರೆಸ್‌ ಪಕ್ಷವು ಜನರ ಆಯ್ಕೆ ಅಲ್ಲ ಎಂಬುದನ್ನು ಚುನಾವಣಾ ಫಲಿತಾಂಶಗಳು ತೋರಿಸುತ್ತಿವೆ. ಕಾಂಗ್ರೆಸ್‌ ಪಕ್ಷವನ್ನು ಪರ್ಯಾಯ ರಾಜಕೀಯ ಶಕ್ತಿಯೆಂದು ಮತದಾರರು ಸ್ವೀಕರಿಸುತ್ತಿಲ್ಲ. ಇದಕ್ಕೆ ಬಿಹಾರ ಮತ್ತು ಹಲವು ರಾಜ್ಯಗಳಲ್ಲಿ ನಡೆದ ಚುನಾವಣೆಗಳೇ ಸಾಕ್ಷಿ' ಎಂದು ಕಪಿಲ್‌ ಸಿಬಲ್‌ ಕಿಡಿಕಾರಿದ್ದಾರೆ.

'ಈ ಹಿಂದೆ ಕೆಲವರು ಸೇರಿ ಪತ್ರ ಬರೆದಿದ್ದೆವು. ಕಾಂಗ್ರೆಸ್‌ ಪಕ್ಷವು ಮುಂದೇನು ಮಾಡಬೇಕೆಂದು ನಾಯಕತ್ವಕ್ಕೆ ತಿಳಿಸಲು ಪ್ರಯತ್ನಿಸಿದ್ದೆವು. ಆದರೆ, ಅವರು ನಮಗೆ ಬೆನ್ನು ತೋರಿಸಿದರು. ಅದರ ಫಲಿತಾಂಶ ನಮ್ಮ ಮುಂದಿದೆ' ಎಂದು ಕಾಂಗ್ರೆಸ್‌ ನಾಯಕತ್ವದ ವಿರುದ್ಧ ಸಿಬಲ್‌ ಹರಿಹಾಯ್ದಿದ್ದಾರೆ.

ADVERTISEMENT

ಕಾಂಗ್ರೆಸ್‌ ಪಕ್ಷದ ನಾಯಕತ್ವದಲ್ಲಿ ಯಾವ ರೀತಿಯ ಬದಲಾವಣೆಗಳಾಗಬೇಕು. ಮುಂದಿನ ದಿನಗಳಲ್ಲಿ ಪಕ್ಷವು ತೆಗೆದುಕೊಳ್ಳಬೇಕಾದ ಮಹತ್ವದ ನಿರ್ಧಾರಗಳೇನು ಎಂಬುದರ ಬಗ್ಗೆ 23 ಹಿರಿಯ ಕಾಂಗ್ರೆಸ್‌ ಮುಖಂಡರು ಕೆಲ ತಿಂಗಳ ಹಿಂದೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು. ಕಾಂಗ್ರೆಸ್‌ನ ಹಿರಿಯ ಮುಖಂಡರ ಪತ್ರದ ವಿಚಾರವಾಗಿ ರಾಹುಲ್‌ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆ ಮತ್ತು ಹಲವು ರಾಜ್ಯಗಳ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಕಳಪೆ ಪ್ರದರ್ಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.