ಕಾರ್ಗಿಲ್ ವಿಜಯ ದಿವಸ
ಡ್ರಾಸ್ (ಕಾರ್ಗಿಲ್): ಹುತಾತ್ಮ ಯೋಧರಿಗೆ ನಾಗರಿಕರು 'ಇ-ಶ್ರದ್ಧಾಂಜಲಿ' ಸಲ್ಲಿಸಬಹುದಾದ ಪೋರ್ಟಲ್ (ವೆಬ್‌ಸೈಟ್) ಅನ್ನು ಭಾರತೀಯ ಸೇನೆ ನಾಳೆ (ಜು.26) ಲೋಕಾರ್ಪಣೆ ಮಾಡಲಿದೆ.
26ನೇ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಸೈನಿಕರ ಶೌರ್ಯ ಮತ್ತು ತ್ಯಾಗದ ಬಗ್ಗೆ ಜನರಿಗೆ ಅರಿವು ಮೂಡಿಸುವ ಹಾಗೂ 'ಇ-ಶ್ರದ್ಧಾಂಜಲಿ' ಸಲ್ಲಿಸುವ ಪೋರ್ಟಲ್ ಸೇರಿದಂತೆ ಪ್ರಮುಖ ಮೂರು ಯೋಜನೆಗಳನ್ನು ಸೇನೆಯು ಆರಂಭಿಸಲಿದೆ.
1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ನಡೆದ ಘಟನೆಗಳನ್ನು ಕಥೆಗಳ ರೂಪದಲ್ಲಿ ಜನರು ಕ್ಯೂಆರ್ ಕೋಡ್ ಆಧಾರಿತ ಆಡಿಯೋ ಅಪ್ಲಿಕೇಶನ್ ಮೂಲಕ ಕೇಳಬಹುದಾದ ಒಂದು ಯೋಜನೆಯನ್ನು ನಾಳೆ ಲೋಕಾಪರ್ಣೆ ಮಾಡಲಾಗುವುದು. ಮತ್ತೊಂದು ಇಂಡಸ್ ವಿವ್ಯೂಪಾಯಿಂಟ್, ಬಟಾಲಿಕ್ ವಲಯದಲ್ಲಿ ನಿಯಂತ್ರಣ ರೇಖೆ(LoC)ವರೆಗೆ ತೆರಳಲು ನಾಗರಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ನಾಗರಿಕರು ಈಗ ಸ್ಮಾರಕಗಳಿಗೆ ಭೇಟಿ ನೀಡದೆ ದೇಶಕ್ಕಾಗಿ ತ್ಯಾಗ ಮಾಡಿದ ಯೋಧರಿಗೆ ಇ-ಶ್ರದ್ಧಾಂಜಲಿ ಸಲ್ಲಿಸಬಹುದು. ಇದಕ್ಕಾಗಿ ಒಂದು ಪೋರ್ಟಲ್ ತೆರೆಯಲಾಗಿದೆ ಎಂದು ಸೇನೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಡ್ರಾಸ್‌ನಲ್ಲಿರುವ ಹುತಾತ್ಮ ಯೋಧರ ವಸ್ತುಸಂಗ್ರಾಹಾಲಯದಲ್ಲಿ ಕಾರ್ಗಿಲ್ ವಿಜಯ ದಿವಸ ಹಾಗೂ ಹುತಾತ್ಮ ಯೋಧರಿಗೆ ಸಂಬಂಧಿಸಿದ ಕಥೆಗಳನ್ನು ಸಂಗ್ರಹಿಸಿ ಇಡಲಾಗಿದೆ. ನಾಗರಿಕರು ಇಯರ್ ಫೋನ್ ಹಾಕಿಕೊಂಡು ಕ್ಯೂಆರ್ ಕೋಡ್ ಅಪ್ಲಿಕೇಶನ್ ಮೂಲಕ ಕೇಳಬಹುದು. ಇಲ್ಲಿಗೆ ಭೇಟಿ ನೀಡಿದ ನಾಗರಿಕರು ಗಡಿ ನಿಯಂತ್ರಣ ರೇಖೆವರೆಗೂ ತೆರಳು ಅವಕಾಶ ಮಾಡಿಕೊಡಲಾಗುವುದು ಎಂದು ಸೇನೆಯ ಅಧಿಕಾರಿಗಳು ಹೇಳಿದ್ದಾರೆ.
'ಕಾರ್ಗಿಲ್ ವಿಜಯ ದಿವಸ'
1999ರ ಜುಲೈ 26ರಂದು ಕಾರ್ಗಿಲ್ ಯುದ್ಧವು ಅಧಿಕೃತವಾಗಿ ಕೊನೆಗೊಂಡಿತ್ತು. ಪಾಕಿಸ್ತಾನ ನುಸುಳುಕೋರರು ವಶಪಡಿಸಿಕೊಂಡಿದ್ದ ಪರ್ವತ ಶ್ರೇಣಿಗಳನ್ನು ಭಾರತೀಯ ಸೈನಿಕರು ಯಶಸ್ವಿಯಾಗಿ ಮರು ವಶಕ್ಕೆ ಪಡೆದಿದ್ದರು.
ಹೀಗಾಗಿ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ವಿಜಯ ಸಾಧಿಸಿದ ಸ್ಮರಣಾರ್ಥ ಈ ದಿನವನ್ನು 'ಕಾರ್ಗಿಲ್ ವಿಜಯ ದಿವಸ' ಎಂದು ಆಚರಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.