ADVERTISEMENT

ನಗರ ವಸತಿ ಯೋಜನೆ: ರಾಜ್ಯದ ನಿರ್ಲಕ್ಷ್ಯ

ತೀವ್ರ ಅಸಮಾಧಾನ ಹೊರಹಾಕಿರುವ ಕೇಂದ್ರ

ಸಿದ್ದಯ್ಯ ಹಿರೇಮಠ
Published 28 ಸೆಪ್ಟೆಂಬರ್ 2020, 20:21 IST
Last Updated 28 ಸೆಪ್ಟೆಂಬರ್ 2020, 20:21 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ನಗರ ಪ್ರದೇಶದ ಬಡ ಜನರಿಗಾಗಿ ಸೂರು ಒದಗಿಸುವ ನಿಟ್ಟಿನಲ್ಲಿ ಆರಂಭಿಸಲಾದ ಪ್ರಧಾನಮಂತ್ರಿ ಆವಾಸ್‌ ಯೋಜನೆ (ಪಿಎಂಎವೈಯು)ಯ ಜಾರಿಯ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸಿದೆ ಎಂದು ಕೇಂದ್ರ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ರಾಜ್ಯಕ್ಕೆ 6.63 ಲಕ್ಷ ಮನೆಗಳನ್ನು ಮಂಜೂರು ಮಾಡಿದ್ದರೂ, 4.03 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ಅವುಗಳಲ್ಲಿ ಈವರೆಗೆ ಕೇವಲ 1.89 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಳಿಸಲಾಗಿದೆ.

ಇನ್ನೂ ಶೇಕಡ 40ರಷ್ಟು ಮನೆಗಳ ನಿರ್ಮಾಣ ಕಾರ್ಯವನ್ನೇ ಆರಂಭಿಸದ್ದಕ್ಕೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕೇಂದ್ರ, ಯೋಜನೆ ಅಡಿ ಕಾಮಗಾರಿ ತ್ವರಿತಗೊಳಿಸುವಂತೆ ಸೂಚಿಸಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.

ADVERTISEMENT

ರಾಜ್ಯ ಸರ್ಕಾರ ಸಲ್ಲಿಸಿದ್ದ ಬೇಡಿಕೆಯ ಪೈಕಿ ಶೇಕಡ 53ರಷ್ಟು ಮನೆಗಳನ್ನು (12.28 ಲಕ್ಷ ಮನೆಗಳ ಪೈಕಿ 6.63 ಲಕ್ಷ) ಮಂಜೂರು ಮಾಡಿರುವ ಕೇಂದ್ರ, ಈ ಸಂಬಂಧ ತನ್ನ ಪಾಲಿನ ₹2,711 ಕೋಟಿ ಅನುದಾನ ಒದಗಿಸಿದೆ.

ಕೇಂದ್ರವು ಮಂಜೂರು ಮಾಡಿದ ಅನುದಾನವನ್ನು ಬಳಕೆ ಮಾಡಿಕೊಂಡ ಪ್ರಮಾಣಪತ್ರವನ್ನೂ ಶೀಘ್ರ ಸಲ್ಲಿಸುವಂತೆ ಸಚಿವಾಲಯವು ರಾಜ್ಯ ಸರ್ಕಾರವನ್ನು ಕೇಳಿದೆ.

ಯೋಜನೆಗಾಗಿ ಇದುವರೆಗೆ ಬಿಡುಗಡೆ ಮಾಡಲಾದ ಅನುದಾನದ ಪೈಕಿ ₹ 1,965 ಕೋಟಿ ಬಳಸಿಕೊಂಡ ಬಗ್ಗೆ ಪ್ರಮಾಣಪತ್ರ ಒದಗಿಸಲಾಗಿದೆ. ಬಾಕಿ ₹ 746 ಕೋಟಿ ಅನುದಾನ ವ್ಯಯಿಸಿರುವ ಬಗ್ಗೆ ವಿವರ ನೀಡಿಲ್ಲ. ರಾಜ್ಯದಿಂದ ಅನುದಾನವನ್ನು ಬಳಕೆ ಮಾಡಿದ ಪ್ರಮಾಣಪತ್ರ (ಯು.ಸಿ) ಒದಗಿಸಿದ ತಕ್ಷಣವೇ ಮುಂದಿನ ಹಂತದ ಅನುದಾನ ಪಾವತಿಸುವುದಾಗಿಯೂ ಪತ್ರದಲ್ಲಿ ತಿಳಿಸಲಾಗಿದೆ.

ಅಂದಾಜು ಶೇಕಡ 40ರಷ್ಟು ಫಲಾನುಭವಿಗಳ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ವಿವರಗಳನ್ನೂ ಒದಗಿಸದ ರಾಜ್ಯ ಸರ್ಕಾರ, ಫಲಾನುಭವಿಗಳೇ ನಿರ್ಮಿಸಿಕೊಳ್ಳುವ ವಿಭಾಗ (ಬಿಎಲ್‌ಸಿ)ಕ್ಕೆ ಸಂಬಂಧಿಸಿದ ಶೇಕಡ 27ರಷ್ಟು ಮನೆಗಳ ಜಿಯೋ ಟ್ಯಾಗ್ ಅನ್ನೂ ಪೂರ್ಣಗೊಳಿಸಿಲ್ಲ ಎಂದು ಆರೋಪಿಸಲಾಗಿದೆ.

ರಾಜ್ಯದಲ್ಲಿನ ಅಂದಾಜು 1,424 ಕೊಳೆಗೇರಿಗಳಲ್ಲಿ ವಾಸವಿರುವ 7.08 ಲಕ್ಷ ನಿವಾಸಿಗಳಿಗಾಗಿ ರಾಜೀವ್ ಆವಾಸ್ ಯೋಜನೆ ಅಡಿಯಲ್ಲಿ ಆರಂಭಿಕ ಹಂತದಲ್ಲಿ 25,800 ಮನೆಗಳನ್ನು ಒದಗಿಸಲು ಅವಕಾಶವಿದ್ದರೂ ಕೊಳೆಗೇರಿಗಳ ನಿರ್ಮೂಲನೆಗೆ ಸಂಬಂಧಿಸಿದ ಕಾರ್ಯಕ್ರಮ ರೂಪಿಸುವಲ್ಲಿಯೂ ರಾಜ್ಯ ಮುಂದಾಗಿಲ್ಲ ಎಂಬ ಅಂಶವನ್ನು ಕೇಂದ್ರ ಸರ್ಕಾರ ಒತ್ತಿ ಹೇಳಿದೆ.

ಗಮನ ಸೆಳೆದ ಕೇಂದ್ರ ಸಚಿವ

ಇತ್ತೀಚೆಗೆ ಕೇಂದ್ರದ ವಸತಿ ಸಚಿವ ಹರದೀಪ್ ಸಿಂಗ್‌ ಪುರಿ ಅವರನ್ನು ಭೇಟಿ ಮಾಡಿ ರಾಜ್ಯಕ್ಕೆ ಮತ್ತಷ್ಟು ಮನೆಗಳನ್ನು ಮಂಜೂರು ಮಾಡುವಂತೆ ರಾಜ್ಯದ ವಸತಿ ಸಚಿವ ವಿ.ಸೋಮಣ್ಣ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರನ್ನು ಒಳಗೊಂಡ ನಿಯೋಗವು ಮನವಿ ಸಲ್ಲಿಸಿದ ಸಂದರ್ಭ ಬಳಕೆ ಪ್ರಮಾಣಪತ್ರ ನೀಡದಿರುವ ಬಗ್ಗೆ ಸಚಿವರೇ ಗಮನ ಸೆಳೆದಿದ್ದಾರೆ.

ಕೂಡಲೇ ಪ್ರಮಾಣಪತ್ರ ಒದಗಿಸಿ ತ್ವರಿತಗತಿಯಲ್ಲಿ ಯೋಜನೆ ಪೂರ್ಣಗೊಳಿಸುವಂತೆ ಸೂಚಿಸಿದ ಕೇಂದ್ರ ಸಚಿವರು, 2022ರೊಳಗೆ ಬಡ ಜನತೆಗೆ ಮನೆ ನಿರ್ಮಿಸಿಕೊಡುವಂತೆ ಸಲಹೆ ನೀಡಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.