ADVERTISEMENT

ಇತರ ರಾಜ್ಯಗಳಲ್ಲಿ ‘ಕರ್ನಾಟಕ ಮಾದರಿ’ ಅಳವಡಿಕೆ: ಶರದ್‌ ಪವಾರ್‌

ಪಿಟಿಐ
Published 14 ಮೇ 2023, 16:31 IST
Last Updated 14 ಮೇ 2023, 16:31 IST
ಶರದ್‌ ಪವಾರ್
ಶರದ್‌ ಪವಾರ್   

ಮುಂಬೈ: ‘ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅನುಸರಿಸಿದ ತಂತ್ರಗಾರಿಕೆ ಮಾದರಿಯನ್ನೇ ಇತರ ರಾಜ್ಯಗಳಲ್ಲಿಯೂ ಅಳವಡಿಸಿಕೊಳ್ಳುವ ಅಗತ್ಯ ಇದೆ’ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಭಾನುವಾರ ಹೇಳಿದರು.

ತಮ್ಮನ್ನು ಇಲ್ಲಿ ಭಾನುವಾರ ಭೇಟಿ ಮಾಡಿದ ಸಿಪಿಐ ನಾಯಕ ಡಿ.ರಾಜಾ ಅವರೊಂದಿಗೆ ಚರ್ಚೆ ನಡೆಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಇಂತಹ ಸಂದೇಶ ರವಾನಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಬಿಜೆಪಿಯನ್ನು ಮಣಿಸಿತು. ಆದರೆ, ಬೇರೆ ರಾಜ್ಯಗಳಲ್ಲಿ ಕರ್ನಾಟಕದಲ್ಲಿದ್ದಂತಹ ಸನ್ನಿವೇಶವನ್ನು ಸೃಷ್ಟಿಸಬೇಕು. ಇದಕ್ಕಾಗಿ ಸಮಾನ ಮನಸ್ಕ ಪಕ್ಷಗಳು ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ ರೂಪಿಸಬೇಕು’ ಎಂದು ಪವಾರ್‌ ಪ್ರತಿಪಾದಿಸಿದರು.

ADVERTISEMENT

‘ಕರ್ನಾಟಕದಲ್ಲಿದ್ದಂತಹ ಸನ್ನಿವೇಶ ಸೃಷ್ಟಿ ಹಾಗೂ ಸಾಮಾನ್ಯ ಕನಿಷ್ಠ ಕಾರ್ಯಕ್ರಮ (ಸಿಎಂಪಿ) ರೂಪಿಸುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗುತ್ತೇವೆ’ ಎಂದು ಹೇಳಿದರು.

ಡಿ.ರಾಜಾ ಮಾತನಾಡಿ, ‘ಮಹಾರಾಷ್ಟ್ರ ವಿಧಾನಸಭೆ ಹಾಗೂ ಮುಂದಿನ ವರ್ಷ ಲೋಕಸಭೆಗೆ ನಡೆಯುವ ಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸುತ್ತೇವೆ. ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಮಾತು ಸುಳ್ಳಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.