ADVERTISEMENT

ದೇಶದ್ರೋಹ ಪ್ರಕರಣದಲ್ಲಿ ಕರ್ನಾಟಕ ಮುಂದು: 2019ರಲ್ಲಿ 22 ಪ್ರಕರಣ ದಾಖಲು

ಮೊದಲ ಸ್ಥಾನದಲ್ಲಿ ಕರ್ನಾಟಕ

ಶೆಮಿಜ್‌ ಜಾಯ್‌
Published 4 ಅಕ್ಟೋಬರ್ 2020, 19:30 IST
Last Updated 4 ಅಕ್ಟೋಬರ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಪೊಲೀಸರು ‘ದೇಶದ್ರೋಹ’ದ ದೂರುಗಳನ್ನು ದಾಖಲಿಸಲು ಹಿಂದೆಂದಿಗಿಂತಲೂ ಹೆಚ್ಚಿನ ಉತ್ಸಾಹ ತೋರಿಸುತ್ತಿರುವುದು ಕಂಡುಬಂದಿದೆ. 2019ರಲ್ಲಿ ಇಂಥ ಪ್ರಕರಣಗಳ ಸಂಖ್ಯೆಯಲ್ಲಿ ಶೇ 25ರಷ್ಟು ಹೆಚ್ಚಳವಾಗಿದೆ. ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ.

ದೇಶದ್ರೋಹದ ಪ್ರಕರಣಗಳು ಹೆಚ್ಚು ದಾಖಲಾಗುತ್ತಿದ್ದರೂ, ಆರೋಪ ಸಾಬೀತಾಗಿ, ಶಿಕ್ಷೆಗೆ ಒಳಗಾಗುವವರ ಪ್ರಮಾಣ ತೀರಾ ಕಡಿಮೆ. ಕಳೆದ ವರ್ಷ ಇಂಥ 30 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಒಂದು ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಮಾತ್ರ ತನಿಖಾಧಿಕಾರಿಗಳು ಯಶಸ್ವಿಯಾಗಿದ್ದಾರೆ.

2015ರಿಂದ 19ರವರೆಗಿನ ಐದು ವರ್ಷಗಳಲ್ಲಿ, ದೇಶದ್ರೋಹದ 283 ಪ್ರಕರಣಗಳು ದಾಖಲಾಗಿದ್ದವು. 56 ಪ್ರಕರಣಗಳ ವಿಚಾರಣೆ ನಡೆದಿದ್ದು, 51 ಪ್ರಕರಣಗಳಿಗೆ ಸಂಬಂಧಿಸಿದಂತೆ 55 ಮಂದಿ ಬಿಡುಗಡೆಯಾಗಿದ್ದಾರೆ. ಉಳಿದ ಐದು ಪ್ರಕರಣಗಳಿಗೆ ಸಂಬಂಧಿಸಿದಂತೆ 9 ಮಂದಿಗೆ ಜೈಲು ಶಿಕ್ಷೆಯಾಗಿದೆ.

ADVERTISEMENT

ಕರ್ನಾಟಕದಲ್ಲೂ ದೇಶದ್ರೋಹದ ಪ್ರಕರಣ ದಾಖಲು ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 2018ರಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದರೆ, ಕಳೆದ ವರ್ಷ ಇಂಥ 22 ಪ್ರಕರಣಗಳು ದಾಖಲಾಗಿವೆ. ಆನಂತರದ ಸ್ಥಾನದಲ್ಲಿ ಕ್ರಮವಾಗಿ ಅಸ್ಸಾಂ (17), ಜಮ್ಮು ಕಾಶ್ಮೀರ (11) ಹಾಗೂ ಉತ್ತರಪ್ರದೇಶ (10) ಇವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಲಾಗಿದೆ. ದೇಶದಾದ್ಯಂತ ದಾಖಲಾಗುತ್ತಿರುವ ಇಂಥ ಪ್ರಕರಣಗಳ ಸಂಖ್ಯೆಯಲ್ಲಿ (93 ಪ್ರಕರಣ) ಕಳೆದ ವರ್ಷ ಶೇ 25ರಷ್ಟು ಏರಿಕೆಯಾಗಿದೆ.

ದೇಶದ್ರೋಹದ ಒಟ್ಟಾರೆ 229 ಪ್ರಕರಣಗಳು ತನಿಖೆಯ ಹಂತದಲ್ಲಿದ್ದು 70 ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಲು ಮಾತ್ರ ಪೊಲೀಸರಿಗೆ ಸಾಧ್ಯವಾಗಿದೆ. ಶೇ 69.43 ಪ್ರಕರಣಗಳ ತನಿಖೆ ಬಾಕಿ ಉಳಿದಿದೆ. ಕೋರ್ಟ್‌ ವಿಚಾರಣೆಗೆ ಬಂದಿದ್ದ 116 ಪ್ರಕರಣಗಳಲ್ಲಿ 30 ಪ್ರಕರಣಗಳು ಮಾತ್ರ ಇತ್ಯರ್ಥಗೊಂಡಿವೆ. ಅಲ್ಲಿಯೂ ಶೇ 74.1ರಷ್ಟು ಪ್ರಕರಣಗಳ ವಿಚಾರಣೆ ಬಾಕಿ ಉಳಿದಿದೆ. ಕಳೆದ ವರ್ಷ ದಾಖಲಾಗಿರುವ ಒಟ್ಟಾರೆ ಪ್ರಕರಣಗಳಲ್ಲಿ 40 ಪ್ರಕರಣಗಳು ಮಾತ್ರ ವಿಚಾರಣೆಯ ಹಂತಕ್ಕೆ ಬಂದಿವೆ.

ತಿದ್ದುಪಡಿಗೆ ಒತ್ತಾಯ

ದೇಶದ್ರೋಹಕ್ಕೆ ಸಂಬಂಧಿಸಿದ ಭಾರತೀಯ ದಂಡಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 124(ಎ)ಗೆ ತಿದ್ದುಪಡಿ ಮಾಡಬೇಕು ಎಂದು ಹೋರಾಟಗಾರರು ಒತ್ತಾಯಿಸುತ್ತಲೇ ಇದ್ದಾರೆ. ಆದರೆ, ‘ಸದ್ಯಕ್ಕೆ ಈ ಕಾನೂನಿಗೆ ಯಾವುದೇ ತಿದ್ದುಪಡಿ ಮಾಡುವ ಉದ್ದೇಶವಿಲ್ಲ’ ಎಂದು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿಯೇ ಹಲವು ಬಾರಿ ಹೇಳಿದೆ. ‘ರಾಷ್ಟ್ರದ್ರೋಹಿಗಳು, ಪ್ರತ್ಯೇಕತಾವಾದಿಗಳು ಹಾಗೂ ಭಯೋತ್ಪಾದಕರನ್ನು ಪರಿಣಾಮಕಾರಿಯಾಗಿ ನಿಗ್ರಹಿಸಲು ಈ ಕಠಿಣ ಕಾನೂನಿನ ಅಗತ್ಯ ಇದೆ’ ಎಂದು ಕೇಂದ್ರದ ಗೃಹಸಚಿವಾಲಯವು ಕಳೆದ ವರ್ಷ ಸಂಸತ್ತಿನಲ್ಲಿ ಹೇಳಿದೆ.

2016ರ ಮಾರ್ಚ್‌ನಲ್ಲಿ ರಾಜ್ಯಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ‘ರಾಷ್ಟ್ರದ್ರೋಹ ಕುರಿತ ಕಾನೂನಿನ ವ್ಯಾಪ್ತಿ ತುಂಬಾ ವಿಸ್ತಾರವಾಗಿದೆ. ಇದಕ್ಕೆ ಕೆಲವು ತಿದ್ದುಪಡಿಗಳನ್ನು ಮಾಡುವ ಅಗತ್ಯವಿದೆ’ ಎಂದು ಒಪ್ಪಿದ್ದರು. ಅದಾದನಂತರ, ಆಗಿನ ಗೃಹಸಚಿವ ರಾಜನಾಥ್‌ ಸಿಂಗ್‌ ಅವರು, ‘ಈ ವಿಚಾರವಾಗಿ ಎಲ್ಲಾ ಪಕ್ಷಗಳ ಅಭಿಪ್ರಾಯವನ್ನು ಪಡೆಯಬೇಕು’ ಎಂಬ ಜೆಡಿಯು ಸಂಸದ ಶರದ್‌ ಯಾದವ್‌ ಅವರ ಸಲಹೆಗೆ ಒಪ್ಪಿಗೆ ಸೂಚಿಸಿದ್ದರು. ಆದರೆ, ಕಾನೂನು ಆಯೋಗವು ತನ್ನ ಶಿಫಾರಸುಗಳನ್ನು ಸಲ್ಲಿಸುವವರೆಗೂ ಕಾಯುವಂತೆ ಮನವಿ ಮಾಡಿದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.