
ಚೆನ್ನೈ: ಕರೂರಿನಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟಿದ್ದ ವ್ಯಕ್ತಿಗೆ ಪಕ್ಷದ ಮುಖ್ಯಸ್ಥ ವಿಜಯ್ ಅವರು ನೀಡಿದ್ದ ₹20 ಲಕ್ಷ ಪರಿಹಾರ ಹಣವನ್ನು ಸಂತ್ರಸ್ತ ವ್ಯಕ್ತಿಯ ಪತ್ನಿ ಹಿಂದಿರುಗಿಸಿದ್ದಾರೆ.
‘ಮೃತರ ಕುಟುಂಬಸ್ಥರನ್ನು ಕರೂರಿನಲ್ಲಿ ಭೇಟಿ ಮಾಡುವುದಾಗಿ ವಿಜಯ್ ಅವರು ಹೇಳಿದ್ದರು. ಆದರೆ ಅವರು ತಮ್ಮ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದು ಮೃತ ರಮೇಶ್ ಅವರ ಪತ್ನಿ ಎಂ.ಸಂಗವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಮಾಮಲ್ಲಪುರದಲ್ಲಿ ವಿಜಯ್ ಅವರನ್ನು ಭೇಟಿ ಮಾಡಲು ನಿರಾಕರಿಸಿದ ನಂತರ ಟಿವಿಕೆ ಪದಾಧಿಕಾರಿಗಳು ನಮ್ಮ ಪ್ರತಿನಿಧಿಯಾಗಿ ಸಂಬಂಧಿಗಳನ್ನು ಕರೆದೊಯ್ದಿದ್ದಾರೆ’ ಎಂದು ಆರೋಪಿಸಿದರು.
38 ಸಂತ್ರಸ್ತ ಕುಟುಂಬಗಳ ಪೈಕಿ ಕೆಲವರು ಮಾಮಲ್ಲಪುರಕ್ಕೆ ಹೋಗಲು ನಿರಾಕರಿಸಿದ್ದಾರೆ. ವಿಜಯ್ ಅವರೇ ಸಂತ್ರಸ್ತ ಕುಟುಂಬಗಳ ನಿವಾಸಕ್ಕೆ ಬರಬೇಕು ಎಂದು ಆಗ್ರಹಿಸಿದ್ದಾರೆ.
‘ಎರಡು ವಾರಗಳ ಹಿಂದೆ ವಿಡಿಯೊ ಕಾಲ್ ಮೂಲಕ ಮಾತನಾಡಿ, ಕರೂರಿನಲ್ಲಿ ನಮ್ಮನ್ನು ಭೇಟಿ ಮಾಡುವುದಾಗಿ ತಿಳಿಸಿದ್ದರು. ಬಳಿಕ ಚೆನ್ನೈಗೆ ನಮ್ಮನ್ನು ಬರಹೇಳಿದಾಗ ನಾವು ನಿರಾಕರಿಸಿದೆವು. ಆದರೆ ಟಿವಿಕೆ ಕಾರ್ಯಕರ್ತರು, ನನ್ನ ಮತ್ತು ಅತ್ತೆಯ ಪ್ರತಿನಿಧಿಯಾಗಿ ನನ್ನ ನಾದಿನಿ ಮತ್ತು ಆಕೆಯ ಪತಿಯನ್ನು ಕರೆದೊಯ್ದಿದ್ದಾರೆ’ ಎಂದು ದೂರಿದರು.
‘ಸಂಬಂಧಿಕರನ್ನು ಕರೆದೊಯ್ಯುವ ಮುನ್ನ ನಮ್ಮ ಅಭಿಪ್ರಾಯವನ್ನೂ ಕೇಳಿಲ್ಲ. ಹೀಗಾಗಿ ವಿಜಯ್ ಅವರು ನನ್ನ ಖಾತೆಗೆ ವರ್ಗಾಯಿಸಿದ್ದ ₹20 ಲಕ್ಷ ಹಣವನ್ನು ಹಿಂದಿರುಗಿಸಲು ನಿರ್ಧರಿಸಿದೆವು’ ಎಂದು ತಿಳಿಸಿದರು.
ಈ ಮಧ್ಯೆ, ‘ಕರೂರಿನಲ್ಲಿ ಭೇಟಿ ಮಾಡಲು ಸಾಧ್ಯವಾಗಿಲ್ಲ’ ಎಂದು ನಟ ವಿಜಯ್ ಅವರು ಸಂತ್ರಸ್ತ ಕುಟುಂಬಸ್ಥರ ಕ್ಷಮೆ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.