ಕೊಚ್ಚಿ: ಕರುವನ್ನೂರು ಕೋ–ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯವು (ಇ.ಡಿ) ಹೊಸತಾಗಿ ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ ಕೇರಳದ ಆಡಳಿತಾರೂಢ ಪಕ್ಷ ಸಿಪಿಐ(ಎಂ) ಪಕ್ಷದ ಹೆಸರನ್ನು ಉಲ್ಲೇಖಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಹಣ ಅಕ್ರಮ ವರ್ಗಾವಣೆ ಪ್ರಕರಣದ ಆರೋಪದ ಅಡಿಯಲ್ಲಿ ಕೇಂದ್ರ ತನಿಖಾ ಸಂಸ್ಥೆಯು ಎರಡನೇ ಸಲ ರಾಜಕೀಯ ಪಕ್ಷವೊಂದನ್ನು ಆರೋಪಿಯನ್ನಾಗಿ ಉಲ್ಲೇಖಿಸಿದೆ. ಅಬಕಾರಿ ನೀತಿ ಹಗರಣದಲ್ಲಿ ಕಳೆದ ವರ್ಷ ದೆಹಲಿಯಲ್ಲಿ ಅಧಿಕಾರ ನಡೆಸುತ್ತಿದ್ದ ಆಮ್ ಆದ್ಮಿ ಪಕ್ಷದ ಹೆಸರನ್ನು ಚಾರ್ಜ್‌ಶೀಟ್‌ನಲ್ಲಿ ಹೆಸರಿಸಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೊದಲ ಪೂರಕ ದೋಷಾರೋಪ ಪಟ್ಟಿಯಲ್ಲಿ 28 ಸಂಸ್ಥೆ ಹಾಗೂ ವ್ಯಕ್ತಿಗಳ ಹೆಸರನ್ನು ಸೇರಿಸಿದೆ. ಇದರಲ್ಲಿ ತ್ರಿಶ್ಶೂರ್ ಸಿಪಿಐ(ಎಂ) ಜಿಲ್ಲಾ ಸಮಿತಿಯ ಕಾರ್ಯದರ್ಶಿ, ಸಂಸದ ಕೆ. ರಾಧಾಕೃಷ್ಣನ್, ಶಾಸಕ ಎ.ಸಿ.ಮೊಯ್ದೀನ್ ಹೆಸರು ಇದೆ.
ಇ.ಡಿ. ಹೊರಿಸಿರುವ ಎಲ್ಲ ಆರೋಪಗಳನ್ನು ತಳ್ಳಿಹಾಕಿರುವ ಸಿಪಿಐ(ಎಂ), ‘ಆರೋಪವನ್ನು ಕಾನೂನಾತ್ಮಕ ಹಾಗೂ ರಾಜಕೀಯವಾಗಿ ಹೋರಾಟ ನಡೆಸಲಾಗುವುದು’ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.