ADVERTISEMENT

ಕಾಸರಗೋಡು ಜಿಲ್ಲೆ ಸ್ತಬ್ಧ: 10 ವರ್ತಕರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 20:21 IST
Last Updated 21 ಮಾರ್ಚ್ 2020, 20:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾಸರಗೋಡು, ಕೇರಳ (ಪಿಟಿಐ): ಕೋವಿಡ್‌–19 ನಿಂದ ಎಂಟು ಜನರು ಬಳಲುತ್ತಿರುವುದು ದೃಢಪಡುತ್ತಿರುವಂತೆಯೇ, ಕಾಸರಗೋಡು ಜಿಲ್ಲೆ ಶನಿವಾರ ಸಂಪೂರ್ಣ ಸ್ತಬ್ಧವಾಗಿದೆ.

ಸೂಚನೆಯನ್ನು ಉಲ್ಲಂಘಿಸಿ ತಮ್ಮ ಮಳಿಗೆಗಳನ್ನು ತೆರೆದು ವ್ಯಾಪಾರಕ್ಕೆ ಮುಂದಾಗಿದ್ದ 10 ಜನ ವರ್ತಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ‘ಕಟ್ಟುನಿಟ್ಟಿನ ಸೂಚನೆ ಹೊರತಾಗಿಯೂ ಅಂಗಡಿಗಳನ್ನು ತೆರೆಯುವ ವ್ಯಾಪಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ’ ಜಿಲ್ಲಾಧಿಕಾರಿ ಡಿ.ಸಜಿತ್ ಬಾಬು ಪೊಲೀಸ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

‘ಕೋವಿಡ್‌ ಇರುವ ವ್ಯಕ್ತಿಯೊಬ್ಬ ವೈದ್ಯರ ಸೂಚನೆಯನ್ನು ಧಿಕ್ಕರಿಸಿ, ಎಲ್ಲೆಡೆ ಸಂಚರಿಸಿದ್ದಾನೆ. ಸಾರ್ವಜನಿಕ ಕಾರ್ಯಕ್ರಮ, ಮದುವೆ ಸಮಾರಂಭಗಳಲ್ಲಿ ಪಾಲ್ಗೊಂಡಿದ್ದ ಆತ, ಫುಟ್ಬಾಲ್‌ ಪಂದ್ಯವನ್ನೂ ವೀಕ್ಷಿಸಿದ್ದಾರೆ. ಹೀಗಾಗಿ ಕಾಸರಗೋಡು ಜಿಲ್ಲೆಯಲ್ಲಿ ಪರಿಸ್ಥಿತಿ ಆತಂಕಕಾರಿಯಾಗಿದೆ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

ಒಂದು ವಾರದ ಮಟ್ಟಿಗೆ ಎಲ್ಲ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸುವುದಿಲ್ಲ ಹಾಗೂ ಅಂಗಡಿಗಳು ಬೆಳಿಗ್ಗೆ 11ರಿಂದ ಸಂಜೆ 5ರ ವರೆಗೆ ಮಾತ್ರ ತೆರೆದಿರಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಆದೇಶಿಸಿದ್ದಾರೆ. ಈ ನಡುವೆ, ಕೋವಿಡ್‌ನಿಂದ ಬಳಲುತ್ತಿದ್ದ ವ್ಯಕ್ತಿಯೊಂದಿಗೆ ಸಂಪರ್ಕ ಬಂದಿರುವ ಹಿನ್ನೆಲೆಯಲ್ಲಿ ಇಬ್ಬರು ಶಾಸಕರು, ತಾವೇ ಸ್ವತಃ ಪ್ರತ್ಯೇಕವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.