ADVERTISEMENT

ಸಹಜಸ್ಥಿತಿ ಸ್ಥಾಪನೆಗೆ ಸರ್ಕಾರಕ್ಕೆ ಸಮಯ ಬೇಕು

ಜಮ್ಮು ಮತ್ತು ಕಾಶ್ಮೀರ: ಸಂವಹನ ನಿರ್ಬಂಧ ಸಡಿಲಿಕೆಗೆ ಆದೇಶ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 19:25 IST
Last Updated 13 ಆಗಸ್ಟ್ 2019, 19:25 IST
   

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಹಜ ಸ್ಥಿತಿ ಮರುಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಸಮಯ ಬೇಕು. ಅಲ್ಲಿನ ಪರಿಸ್ಥಿತಿ ಗಂಭೀರವಾಗಿದೆ. ಹಾಗಾಗಿ, ನಿರ್ಬಂಧಗಳನ್ನು ಸಡಿಲಿಸಲು ರಾತ್ರೋರಾತ್ರಿ ಏನೂ ಮಾಡಲಾಗದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

ದೂರವಾಣಿ ಮತ್ತು ಇಂಟರ್‌ನೆಟ್‌ ಸೇವೆಗಳ ಮೇಲಿನ ನಿರ್ಬಂಧ ತೆಗೆಯುವ ಬಗ್ಗೆ ತುರ್ತು ಆದೇಶ ನೀಡಲು ಸಾಧ್ಯವಿಲ್ಲ ಎಂದೂ ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮತ್ತು ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವುದಕ್ಕೆ ಮುನ್ನ ಇದೇ 4ರಂದು ಈ ನಿರ್ಬಂಧಗಳನ್ನು ಹೇರಲಾಗಿತ್ತು.

‘ಅಲ್ಲಿನ ಸ್ಥಿತಿ ಏನು, ಅಲ್ಲಿ ಏನು ನಡೆಯುತ್ತಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಹಾಗಾಗಿ ಎಲ್ಲ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಬೇಕು’ ಎಂದು ಪೀಠವು ಹೇಳಿತು.

ADVERTISEMENT

ಪೊಲೀಸ್‌ ಠಾಣೆ, ಆಸ್ಪತ್ರೆ ಮತ್ತು ಶಾಲೆಗಳ ದೂರವಾಣಿ ಸಂಪರ್ಕಗಳ ನಿರ್ಬಂಧವನ್ನಾದರೂ ರದ್ದುಮಾಡಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ತೆಹ್ಸೀನ್‌ ಪೂನಾವಾಲಾ ಸಲ್ಲಿಸಿದ ಅರ್ಜಿಯನ್ನು ಪೀಠವು ವಿಚಾರಣೆ ನಡೆಸಿತು.

‘ಪೊಲೀಸ್‌ ಠಾಣೆ ಮತ್ತು ಆಸ್ಪತ್ರೆಯನ್ನು ಸಂಪರ್ಕಿಸಲೂ ಸಾಧ್ಯವಾಗದ ರೀತಿಯಲ್ಲಿ ಸಾರಾಸಗಟು ನಿರ್ಬಂಧ ಹೇರಿರುವುದು ಸರಿಯೇ? ಸಶಸ್ತ್ರ ಪಡೆಯ ಯೋಧರು ಕೂಡ ತಮ್ಮ ಕುಟುಂಬ ಸದಸ್ಯರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ’ ಎಂದು ತಮ್ಮ ಅರ್ಜಿಯಲ್ಲಿ ತೆಹ್ಸೀನ್‌ ಹೇಳಿದ್ದರು.

‘ನೀವು ಸೈನಿಕರಿಗೆ ಸಂಬಂಧಿಸಿ ಅರ್ಜಿ ಸಲ್ಲಿಸಿಲ್ಲ. ಕೆಟ್ಟದಾಗಿ ಬರೆದು ಸಲ್ಲಿಸಿರುವ ನಿಮ್ಮ ದೂರು ಸೈನಿಕರ ಬಗ್ಗೆ ಅಲ್ಲ. ಅಷ್ಟೇ ಅಲ್ಲ, ಸೈನಿಕರು ಕೂಡ ಕಾನೂನಿನ ಅಡಿಯಲ್ಲಿಯೇ ಬರುತ್ತಾರೆ’ ಎಂದು ಪೀಠ ಪ್ರತಿಕ್ರಿಯೆ ನೀಡಿದೆ.

ಕೆಲವು ವರ್ಗಗಳಿಗೆ ಮಾತ್ರ ನಿರ್ಬಂಧ ತೆರವು ಮಾಡುವ ತಂತ್ರಜ್ಞಾನ ಇದೆಯೇ ಎಂದು ಪೀಠ ಪ್ರಶ್ನಿಸಿತು.

ಕೆಲವೇ ದಿನಗಳಲ್ಲಿ ಪರಿಸ್ಥಿತಿ ತಿಳಿಯಾಗಲಿದೆ. ಅಲ್ಲಿಗೆ ಯೋಧರು ಮತ್ತು ಅರೆಸೇನಾ ಪಡೆಗಳನ್ನು ಕಳುಹಿಸಲಾಗಿದೆ. ಸರ್ಕಾರ ಕೈಗೊಂಡ ನಿರ್ಧಾರಗಳು ಸಂವಿಧಾನಬದ್ಧವಾಗಿವೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಾಗ ಅನನುಕೂಲ ಸ್ಥಿತಿ ಕನಿಷ್ಠವಾಗಿರುವಂತೆ ನೋಡಿಕೊಳ್ಳಬೇಕು. 1990ರಿಂದಲೇ ಅಲ್ಲಿ ಪರಿಸ್ಥಿತಿ ಕೆಟ್ಟದಾಗಿದೆ. 2016ರಲ್ಲಿ ಇಂತಹುದೇ ಪರಿಸ್ಥಿತಿ ನಿರ್ಮಾಣ ಆಗಿ, 40 ಜನರು ಜೀವ ಕಳೆದುಕೊಂಡಿದ್ದರು. ಆದರೆ, ಈ ಬಾರಿ ಒಂದು ಜೀವಹಾನಿಯೂ ಆಗಿಲ್ಲ ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.