ಜಮ್ಮು–ಕಾಶ್ಮೀರದ ಶ್ರೀನಗರ
ಸಾಂಕೇತಿಕ ಚಿತ್ರ:
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ 60ರಷ್ಟು ಮೀಸಲಾತಿ ನೀಡುವ ಕೇಂದ್ರ ಸರ್ಕಾರದ ಅಧಿಸೂಚನೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಕೇಂದ್ರದ ಈ ನಿಲುವಿಗೆ ಕೇಂದ್ರಾಡಳಿತ ಪ್ರದೇಶದ ಯುವ ಸಮುದಾಯವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಕಳೆದ ಮಾರ್ಚ್‌ನಲ್ಲಿ ಮೀಸಲಾತಿ ಕೋಟಾದ ಅಧಿಸೂಚನೆ ಪ್ರಕಟಗೊಂಡ ನಂತರ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ರಾಜ್ಯದ ಯುವ ಸಮುದಾಯವು ಭಯೋತ್ಪಾದನೆ, ಪ್ರತ್ಯೇಕತಾವಾದವನ್ನು ಬೆಂಬಲಿಸುವ ಈ ಹಿಂದಿನ ನಿರ್ಧಾರಗಳಿಗೆ ವ್ಯತಿರಿಕ್ತವಾಗಿ, ಸರ್ಕಾರಿ ಉದ್ಯೋಗಗಳಲ್ಲಿ ಅರ್ಹತೆ ಆಧಾರದಲ್ಲಿ ನೇಮಕಾತಿ ನಡೆಸುವಂತೆ ಒತ್ತಾಯಿಸಿ, ಬೀದಿಗಿಳಿದಿದೆ.
ಅವಕಾಶಗಳಲ್ಲಿ ಸಮಾನತೆಯನ್ನು ಪ್ರತಿಪಾದಿಸುವ ಜೊತೆಗೆ ಯುವ ಸಮುದಾಯದಲ್ಲಿ ಈ ಹೋರಾಟ ಹೊಸ ಹುರುಪು ಮೂಡಿಸಿದೆ. ಈಗಲೂ ಕೆಲವು ಯುವಕರು ಭಯೋತ್ಪಾದಕ ಸಂಘಟನೆಗಳಿಗೆ ಸೇರ್ಪಡೆಯಾಗುತ್ತಿದ್ದರೂ, ಈ ಪ್ರಮಾಣದಲ್ಲಿ ತೀವ್ರ ಇಳಿಕೆಯಾಗಿದೆ.
ರಾಜಕೀಯ ಪಕ್ಷಗಳ ಮೌನ: ಸಾಮಾನ್ಯ ವರ್ಗಕ್ಕೆ ಮೀಸಲಾತಿ ಕಡಿತದಲ್ಲಿ ಅನ್ಯಾಯವಾಗಿರುವುದಕ್ಕೆ ರಾಜಕೀಯ ಪಕ್ಷಗಳು ಖಾಸಗಿಯಾಗಿ ಸಹಮತ ವ್ಯಕ್ತಪಡಿಸಿವೆ. ಚುನಾವಣೆ ವೇಳೆ ಮೀಸಲು ವರ್ಗದ ಮತದಾರರನ್ನು ಕಳೆದುಕೊಳ್ಳಬಹುದೆಂಬ ಭಯದಿಂದ ಯಾರೊಬ್ಬರೂ ಬಹಿರಂಗವಾಗಿ ಹೇಳಿಕೆ, ಬೆಂಬಲ ನೀಡಿಲ್ಲ.
‘ಹೊಸ ಮೀಸಲಾತಿ ನೀತಿಯು, ಅಸಂಖ್ಯಾತ ಪ್ರತಿಭಾವಂತ ವಿದ್ಯಾರ್ಥಿಗಳ ಅಕಾಂಕ್ಷೆಗಳನ್ನು ದುರ್ಬಲಗೊಳಿಸಿದೆ. ಎಲ್ಲ ಪಾಲುದಾರರಿಗೆ ಸಮಾನ ಅವಕಾಶ ನೀಡುವ ನಿಟ್ಟಿನಲ್ಲಿ ಈ ನೀತಿಯನ್ನು ಮರುಪರಿಶೀಲಿಸಬೇಕು’ ಎಂದು ಪಿಡಿಪಿ ಮುಖಂಡ ವಾಹೀನ್ ಪರಾ ‘ಎಕ್ಸ್’ನಲ್ಲಿ ಟ್ವೀಟ್ ಮಾಡಿದ್ದರು. ಇದಾದ ಆರು ಗಂಟೆಗಳ ನಂತರ ಆ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದರು.
ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಅಂತರ ಕಾಯ್ದುಕೊಂಡಿದ್ದು, ಪಕ್ಷದ ಅಭಿಪ್ರಾಯ ವ್ಯಕ್ತಪಡಿಸಿಲ್ಲ.
ಯೂತ್ ಎಗೇನ್ಸ್ಟ್ ಕರಪ್ಷನ್(ವೈಎಎಸಿ) ಮುಖಂಡರಾದ ಸಾಹಿಲ್ ಪರ್ರೆ ಹಾಗೂ ವಿಂಕಲ್ ಶರ್ಮಾ ಅವರು ಮೀಸಲಾತಿ ನೀತಿಗೆ ಅಸಮಾಧಾನ ವ್ಯಕ್ತಪಡಿಸಿದ್ದು, ‘ಯುವ ಸಮುದಾಯದ ಕಳವಳವನ್ನು ಅರ್ಥ ಮಾಡಿಕೊಂಡು, ಸಮಸ್ಯೆಗೆ ಪರಿಹಾರ ನೀಡಲು ಸ್ಥಳೀಯ ರಾಜಕಾರಣಿಗಳು ಮುಂದಾಗಬೇಕು’ ಎಂದು ಒತ್ತಾಯಿಸಿದ್ದಾರೆ.
ಯಾರಿಗೆಷ್ಟು ಮೀಸಲಾತಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಶಿಕ್ಷಣ ಹಾಗೂ ಉದ್ಯೋಗದ ಅವಕಾಶಗಳಲ್ಲಿ ಶೇ 60ರಷ್ಟು ಮೀಸಲಾತಿ ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅದರಂತೆ, ಪರಿಶಿಷ್ಟ ಜಾತಿಗೆ ಶೇ 8, ಪರಿಶಿಷ್ಟ ಪಂಗಡಕ್ಕೆ ಶೇ 20, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ವರ್ಗಕ್ಕೆ ಶೇ 8, ಗಡಿ ನಿಯಂತ್ರಣ ರೇಖೆಯ ನಿವಾಸಿಗಳಿಗೆ ಶೇ 4, ಹಿಂದುಳಿದ ಪ್ರದೇಶದ ನಿವಾಸಿಗಳು, ಆರ್ಥಿಕ ಹಿಂದುಳಿದ ವರ್ಗ ಶೇ 10, ಅಂಗವಿಕಲರಿಗೆ ಶೇ 4, ರಕ್ಷಣಾ ಇಲಾಖೆಯ ಮಕ್ಕಳಿಗೆ ಶೇ 3, ಕ್ರೀಡಾ ಕೋಟಾ ಶೇ 2 ಹಾಗೂ ಅರೆಸೇನಾ ಪಡೆ, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವವರ ಮಕ್ಕಳಿಗೆ ಶೇ 1 ಮೀಸಲಾತಿ ನೀಡಲಾಗಿದೆ.
2011ರ ಜನಗಣತಿ ಪ್ರಕಾರ, ಕಾಶ್ಮೀರ ಕಣಿವೆಯ ಒಟ್ಟು ಜನಸಂಖ್ಯೆಯಲ್ಲಿ ಶೇ 69ರಷ್ಟು ಸಾಮಾನ್ಯ ವರ್ಗದ ವ್ಯಾಪ್ತಿಗೆ ಒಳಪಡುತ್ತಾರೆ. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗದ ವರ್ಗೀಕರಣ ಮಾಡದ ಕಾರಣ, ಇವರು ಕೂಡ ಸಾಮಾನ್ಯ ವರ್ಗದ ವ್ಯಾಪ್ತಿಯಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.