ADVERTISEMENT

ವಿಡಿಯೊದಲ್ಲಿ ನೂಪುರ್ ಶರ್ಮಾ ತಲೆ ಕತ್ತರಿಸಿದ್ದ ಕಾಶ್ಮೀರದ ಯುಟ್ಯೂಬರ್ ಕ್ಷಮೆಯಾಚನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜೂನ್ 2022, 9:32 IST
Last Updated 11 ಜೂನ್ 2022, 9:32 IST
ಫೈಸಲ್ ವಾನಿ ಎಂದು ಹೇಳಲಾದ ವ್ಯಕ್ತಿ ವಿಎಎಫ್‌ಎಕ್ಸ್ ವಿಡಿಯೊದಲ್ಲಿ ನೂಪುರ್ ಶರ್ಮಾ ತಲೆ ಕತ್ತರಿಸುವ ವಿಡಿಯೊದ ಸ್ಕ್ರೀನ್ ಶಾಟ್
ಫೈಸಲ್ ವಾನಿ ಎಂದು ಹೇಳಲಾದ ವ್ಯಕ್ತಿ ವಿಎಎಫ್‌ಎಕ್ಸ್ ವಿಡಿಯೊದಲ್ಲಿ ನೂಪುರ್ ಶರ್ಮಾ ತಲೆ ಕತ್ತರಿಸುವ ವಿಡಿಯೊದ ಸ್ಕ್ರೀನ್ ಶಾಟ್   

ಬೆಂಗಳೂರು: ಬಿಜೆಪಿ ಮಾಜಿ ವಕ್ತಾರೆ ಹಾಗೂ ವಿವಾದಿತ ನೂಪುರ್ ಶರ್ಮಾ ಅವರ ತಲೆ ಕತ್ತರಿಸುವ ವಿಎಫ್‌ಎಕ್ಸ್ ವಿಡಿಯೊ (ಅಣಕು ವಿಡಿಯೊ) ಹಾಕಿದ್ದ ಕಾಶ್ಮೀರ ಮೂಲದ ಯುಟ್ಯೂಬರ್ ಇದೀಗ ಬಹಿರಂಗ ಕ್ಷಮೆ ಕೇಳಿದ್ದಾನೆ.

ಯುಟ್ಯೂಬರ್ ಫೈಸಲ್ ವಾನಿ ಎಂಬಾತ ನೂಪುರ್ ಶರ್ಮಾ ಪ್ರವಾದಿ ಮಹಮ್ಮದರ ಬಗ್ಗೆ ಮಾಡಿದ್ದ ವಿವಾದ ಭುಗಿಲೆದ್ದ ನಂತರ ಅವರ ಮೇಲೆ ಆಕ್ರೋಶಗೊಂಡು ಕೊಡಲಿಯಿಂದ ತಲೆ ಕತ್ತರಿಸುವ ರೀತಿ ಹಿಂಸಾತ್ಮಕ ವಿಎಫ್‌ಎಕ್ಸ್ ವಿಡಿಯೊ ಹಾಕಿದ್ದ. Deep Pain Fitness ಎಂಬ ಚಾನಲ್‌ನಲ್ಲಿವಿಡಿಯೊ ಹಾಕಿ‘ನೂಪುರ್ ಮಾಡಿದ ತಪ್ಪಿಗೆ ತಲೆತೆಗೆಯುವುದೇ ಪರಿಹಾರ’ಎಂಬ ಒಕ್ಕಣಿಕೆ ಸೇರಿಸಿದ್ದ.

ಈ ವಿಡಿಯೊ ಸಾಕಷ್ಟು ವೈರಲ್ ಕೂಡ ಆಗಿತ್ತು. ಇದೀಗ ‘ಫೈಸಲ್ ವಾನಿ ತಾನು ತಪ್ಪು ಮಾಡಿದ್ದೇನೆ. ನನ್ನ ವಿಡಿಯೊ ಹಿಂಸೆಗೆ ಪ್ರಚೋಧನೆ ನೀಡುವಂತದ್ದಾಗಿದೆ. ಅದನ್ನು ನಾನು ಅಳಿಸಿ ಹಾಕಿದ್ದೇನೆ. ನಾನು ಮಾಡಿದ ತಪ್ಪಿಗೆ ನನ್ನನ್ನು ದಯವಿಟ್ಟು ಕ್ಷಮಿಸಿ. ನೂಪುರ್ ಶರ್ಮಾ ಪ್ರವಾದಿ ಮಹಮ್ಮದ್‌ರ ಬಗ್ಗೆ ನೀಡಿದ್ದ ಹೇಳಿಕೆಯನ್ನು ನಾನು ಕ್ಷಮಿಸುತ್ತೇನೆ. ಏಕೆಂದರೆ ನನಗೆ ಇಸ್ಲಾಂ ಧರ್ಮ ಸಹಿಷ್ಣುತೆಯನ್ನು ಕಲಿಸಿದೆ’ ಎಂದು ಹೇಳಿದ್ದಾರೆ.

ADVERTISEMENT

ಅಲ್ಲದೇ ಫೈಸಲ್ ವಾನಿಯ ಹಿಂಸಾತ್ಮಕ ವಿಡಿಯೊ ಬಗ್ಗೆ ಯೂಟ್ಯೂಬ್ ಕಂಪನಿಗೆ ದೂರುಗಳು ಹಾಗೂ ಕೆಲ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ.

ಇನ್ನೊಂದೆಡೆ ನೂಪುರ್ ಶರ್ಮಾ ಅವರ ವಿರುದ್ಧ ದೇಶದ ಹಲವೆಡೆ ಭಾರೀ ಪ್ರತಿಭಟನೆಗಳನ್ನು ಮುಸ್ಲಿಂ ಸಮುದಾಯದವರು ನಡೆಸುತ್ತಿದ್ದಾರೆ. ಈ ವೇಳೆ ಉತ್ತರ ಪ್ರದೇಶದ ಪ್ರಯಾಗರಾಜ್ ಹಾಗೂ ರಾಂಚಿಯಲ್ಲಿ ವ್ಯಾಪಕ ಹಿಂಸಾಚಾರಗಳು ನಡೆದಿವೆ. ಶರ್ಮಾ ವಿರುದ್ಧ ಕೆಲವರು ಜೀವ ಬೆದರಿಕೆ ಹಾಕಿದ್ದರೆ, ಇನ್ನೂ ಕೆಲವರು ಅನೇಕ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.