ADVERTISEMENT

ಉಗ್ರರ ದಾಳಿ: ಎರಡು ತಿಂಗಳಲ್ಲಿ ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 0:30 IST
Last Updated 10 ಜುಲೈ 2024, 0:30 IST
<div class="paragraphs"><p>ಸಾಂಕೇತಿಕ ಚಿತ್ರ&nbsp;</p></div>

ಸಾಂಕೇತಿಕ ಚಿತ್ರ 

   

ಡೆಹ್ರಾಡೂನ್‌: ಭಾರತೀಯ ಸೇನೆಯಲ್ಲಿ ಮೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದ 33 ವರ್ಷದ ಯೋಧ ಪ್ರಣಯ್‌ ನೇಗಿಯವರನ್ನು ಕಳೆದುಕೊಂಡ ದುಃಖದಿಂದ ಇನ್ನೂ ಹೊರಬರದ ಕುಟುಂಬವು ಮತ್ತೊಬ್ಬ ಮಗ, ರೈಫಲ್‌ಮ್ಯಾನ್‌ ಆದರ್ಶ್‌ ನೇಗಿ ಉಗ್ರರ ಗುಂಡಿಗೆ ಎದೆಯೊಡ್ಡಿ ಹುತಾತ್ಮನಾಗಿರುವುದರಿಂದ ಮತ್ತೊಂದು ಭಾರಿ ಆಘಾತಕ್ಕೆ ಸಿಲುಕಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ಬೆಂಗಾವಲು ಪಡೆ ವಾಹನದ ಮೇಲೆ ಸೋಮವಾರ ಉಗ್ರರು ನಡೆಸಿದ ಹೊಂಚು ದಾಳಿಯಲ್ಲಿ 26 ವರ್ಷದ ಆದರ್ಶ್ ನೇಗಿ ಹುತಾತ್ಮರಾಗಿದ್ದಾರೆ. ಇವರು ಹುತಾತ್ಮ ಯೋಧ ಪ್ರಣಯ್‌ ನೇಗಿಯವರ ಸೋದರ ಸಂಬಂಧಿ.

ADVERTISEMENT

‘ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದ ಮಗ ಮೇಜರ್‌ ಪ್ರಣಯ್‌ ನೇಗಿಯನ್ನು ಎರಡು ತಿಂಗಳ ಹಿಂದೆ ಕಳೆದುಕೊಂಡಿದ್ದೆವು. ಈಗ, ಜಮ್ಮು ಮತ್ತು ಕಾಶ್ಮೀರದ ಪೌರಿ-ಗಢವಾಲ್ ಪ್ರದೇಶದ ಮಚೇಡಿಯಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಐವರು ಸೈನಿಕರಲ್ಲಿ ನನ್ನ ಅಣ್ಣನ ಮಗ ಆದರ್ಶ್ ನೇಗಿ ಕೂಡ ಇದ್ದಾನೆ’ ಎಂದು ಆದರ್ಶ್‌ ನೇಗಿಯವರ ಚಿಕ್ಕಪ್ಪ, ಉತ್ತರಾಖಂಡದ ತೆಹ್ರಿ ಜಿಲ್ಲೆಯ ಥಾಟಿ ದಗರ್ ಗ್ರಾಮದ ನಿವಾಸಿ ಬಲ್ವಂತ್ ಸಿಂಗ್ ನೇಗಿ ಹೇಳಿದರು ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.

ಬಲ್ವಂತ್ ನೇಗಿ ಅವರ ಪುತ್ರ, ಮೇಜರ್ ಪ್ರಣಯ್ ನೇಗಿ ಅವರು ಲೇಹ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಏಪ್ರಿಲ್ 30 ರಂದು ಕರ್ತವ್ಯದ ವೇಳೆ ಉಗ್ರರ ಗುಂಡಿನ ದಾಳಿಯಿಂದ ಹುತಾತ್ಮರಾಗಿದ್ದರು. ಆದರ್ಶ್‌ ನೇಗಿ 2018ರಲ್ಲಿ ಗರ್ವಾಲ್ ರೈಫಲ್ಸ್‌ಗೆ ಸೇರಿದ್ದರು.

‘ನಾವು ಭಾನುವಾರವಷ್ಟೇ ಮಗನೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೆವು. ಮಗ ಊಟ ಮಾಡಿ, ಕರ್ತವ್ಯಕ್ಕೆ ಹೋಗುತ್ತಿರುವುದಾಗಿ ಹೇಳಿದ್ದ. ಮದುವೆಯಲ್ಲಿ ಪಾಲ್ಗೊಳ್ಳಲು ಗ್ರಾಮಕ್ಕೆ ಬಂದು, ಮಾರ್ಚ್‌ನಲ್ಲಿ ಸೇನೆಗೆ ವಾಪಸಾಗಿದ್ದ’ ಎಂದು ಆದರ್ಶ್ ನೇಗಿ ಅವರ ತಂದೆ ದಲ್ಬೀರ್ ಸಿಂಗ್ ನೇಗಿ ಕಣ್ಣೀರಾದರು. 

‘ಎರಡು ತಿಂಗಳಲ್ಲಿ ನಾವು ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡಿದ್ದೇವೆ. ಸರ್ಕಾರವು ಕೆಲವು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ವಿನಂತಿಸುತ್ತೇನೆ. ಈ ಭಾಗದಲ್ಲಿ ಉದ್ಯೋಗವು ವಿರಳವಾಗಿದೆ. ಗರ್ವಾಲ್ ಮತ್ತು ಕುಮಾನ್‌ನಿಂದ ದೇಶ ಸೇವೆ ಮಾಡಲು ಹೋದ ಮಕ್ಕಳು ಆಗಾಗ್ಗೆ ಹುತಾತ್ಮರಾಗಿ ಮರಳುತ್ತಾರೆ. ಇದು ಇಡೀ ಕುಟುಂಬವನ್ನು ಕಷ್ಟಕ್ಕೆ ನೂಕುತ್ತಿದೆ’ ಎಂದು ಅವರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.