ADVERTISEMENT

25ರಿಂದ ಕೇದಾರನಾಥ ಯಾತ್ರೆ ಆರಂಭ: ಟೋಕನ್‌ ವ್ಯವಸ್ಥೆ ಜಾರಿ

ಪಿಟಿಐ
Published 19 ಏಪ್ರಿಲ್ 2023, 16:35 IST
Last Updated 19 ಏಪ್ರಿಲ್ 2023, 16:35 IST
ಕೇದಾರನಾಥ ಯಾತ್ರೆ
ಕೇದಾರನಾಥ ಯಾತ್ರೆ   

ರುದ್ರಪ್ರಯಾಗ್: ಕೇದಾರನಾಥ ಯಾತ್ರೆ ಇದೇ 25ರಿಂದ ಆರಂಭಗೊಳ್ಳಲಿದ್ದು, ಈ ಬಾರಿ ದಿನವೊಂದಕ್ಕೆ 13 ಸಾವಿರ ಯಾತ್ರಿಕರ ಭೇಟಿಗಷ್ಟೇ ಅನುಮತಿ ನೀಡಲಾಗಿದೆ.

‘ಸರ್ಕಾರ ಈ ಬಾರಿ ಯಾತ್ರಾರ್ಥಿಗಳಿಗೆ ಟೋಕನ್‌ ವ್ಯವಸ್ಥೆಯನ್ನೂ ಪರಿಚಯಿಸಿದೆ. ಸುಗಮ ಯಾತ್ರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ರುದ್ರಪ್ರಯಾಗ್‌ ಜಿಲ್ಲಾಧಿಕಾರಿ ಮಯೂರ್‌ ದೀಕ್ಷಿತ್‌ ಸುದ್ದಿಗಾರರಿಗೆ ತಿಳಿಸಿದರು.

ಯಾತ್ರಿಕರ ಆರೋಗ್ಯದ ಸುರಕ್ಷತೆಗೆ ಜಿಲ್ಲಾಡಳಿತ ಅಗತ್ಯ ಕ್ರಮವಹಿಸಿದೆ. 22 ವೈದ್ಯರು ಸೇರಿದಂತೆ ಅಷ್ಟೇ ಸಂಖ್ಯೆಯ ಅರೆವೈದ್ಯಕೀಯ ಸಿಬ್ಬಂದಿಯನ್ನು ಯಾತ್ರಾ ಮಾರ್ಗದಲ್ಲಿ ನಿಯೋಜಿಸಲಾಗಿದೆ. 12 ವೈದ್ಯಕೀಯ ಶಿಬಿರ ತೆರೆಯಲಾಗಿದೆ. ಆರು ಆಂಬುಲೆನ್ಸ್‌ಗಳು ಕಾರ್ಯ ನಿರ್ವಹಿಸಲಿವೆ. ತುರ್ತು ನೆರವಿಗಾಗಿ ಏರ್‌ ಆಂಬುಲೆನ್ಸ್‌ ಸೇವೆಗೂ ಸರ್ಕಾರ ಅನುಮತಿ ನೀಡಿದೆ ಎಂದು ವಿವರಿಸಿದರು.

ADVERTISEMENT

ಸುಲಭ್‌ ಇಂಟರ್‌ನ್ಯಾಷನಲ್‌ ಯಾತ್ರಾ ಮಾರ್ಗದ ಸ್ವಚ್ಛತೆಯ ಹೊಣೆ ಹೊತ್ತಿದೆ. ಕೇದಾರನಾಥ ನಗರ ಪಂಚಾಯಿತಿಯಿಂದ ದೇಗುಲದ ಆವರಣ, ಸುತ್ತಮುತ್ತಲಿನ ಪ್ರದೇಶದ ಸ್ವಚ್ಛತಾ ನಿರ್ವಹಣೆ ನಡೆಯಲಿದೆ. ಯಾತ್ರಾರ್ಥಿಗಳಿಗೆ ಅಗತ್ಯ ಕುಡಿಯುವ ನೀರು ಪೂರೈಕೆಗೂ ಕ್ರಮವಹಿಸಲಾಗಿದೆ ಎಂದರು.

‘ಭದ್ರತೆಗಾಗಿ 450 ಪೊಲೀಸರನ್ನು ನಿಯೋಜಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಶಾಖ ಅಶೋಕ್‌ ಬದಾನೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.