ADVERTISEMENT

ಗುಜರಾತಲ್ಲಿ ಅಧಿಕಾರಕ್ಕೆ ಬಂದರೆ ಗೋವು ಸಾಕಲು ದಿನಕ್ಕೆ ₹40 ನೆರವು: ಕೇಜ್ರಿವಾಲ್

ಗುಜರಾತ್‌ ಚುನಾವಣೆ: ಅರವಿಂದ ಕೇಜ್ರಿವಾಲ್‌ ಘೋಷಣೆ * ಹಿಂದೂ ಮತ ಸೆಳೆಯುವ ತಂತ್ರ– ವಿಶ್ಲೇಷಣೆ

ಪಿಟಿಐ
Published 2 ಅಕ್ಟೋಬರ್ 2022, 14:07 IST
Last Updated 2 ಅಕ್ಟೋಬರ್ 2022, 14:07 IST
ರಾಜ್‌ಕೋಟ್‌ನಲ್ಲಿ ಭಾನುವಾರ ನಡೆ‌ದ ಪತ್ರಿಕಾಗೋಷ್ಠಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮಾತನಾಡಿದರು –ಪಿಟಿಐ ಚಿತ್ರ
ರಾಜ್‌ಕೋಟ್‌ನಲ್ಲಿ ಭಾನುವಾರ ನಡೆ‌ದ ಪತ್ರಿಕಾಗೋಷ್ಠಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮಾತನಾಡಿದರು –ಪಿಟಿಐ ಚಿತ್ರ   

ರಾಜ್‌ಕೋಟ್‌: ಗುಜರಾತ್‌ನಲ್ಲಿ ಅಧಿಕಾರಕ್ಕೆ ಬಂದರೆ, ಗೋವುಗಳನ್ನು ಸಾಕುವವರಿಗೆ ಒಂದು ಗೋವಿಗೆ ಪ್ರತಿ ದಿನ ₹40 ನೆರವು ನೀಡುವುದಾಗಿ ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್‌ ಭಾನುವಾರ ಘೋಷಿಸಿದ್ದಾರೆ. ಹಾಲು ಕರೆಯದ ಹಾಗೂ ಬೀಡಾಡಿ ಗೋವುಗಳಿಗಾಗಿ ಪ್ರತಿ ಜಿಲ್ಲೆಯಲ್ಲಿ ಗೋಶಾಲೆಯನ್ನು ನಿರ್ಮಿಸುವುದಾಗಿಯೂ ಭರವಸೆ ನೀಡಿದ್ದಾರೆ.

ಆಡಳಿತ ಪಕ್ಷ ಬಿಜೆಪಿಯ ‘ಗೋ ಸಂರಕ್ಷಣೆ’ ನೀತಿಗೆ ಅದೇ ದಾರಿಯಲ್ಲೇ ತಿರುಗೇಟು ನೀಡಿ ಹಿಂದೂ ಮತಗಳನ್ನು ಸೆಳೆಯಲು ಕೇಜ್ರಿವಾಲ್‌ ಯತ್ನಿಸುತ್ತಿದ್ದಾರೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

ಭಾನುವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್‌, ‘ಗೋವುಗಳ ಸಂರಕ್ಷಣೆಗಾಗಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದರು.

ADVERTISEMENT

ಗೋಶಾಲೆಗಳ ಅಭಿವೃದ್ಧಿಗಾಗಿ ಗುಜರಾತ್‌ ಬಿಜೆಪಿ ಸರ್ಕಾರ ಹಣ ಮೀಸಲಿರಿಸಿದೆ. ಆದರೆ, ಈ ಹಣವನ್ನು ಬಿಡುಗಡೆ ಮಾಡಿಲ್ಲ. ಆದ್ದರಿಂದ ಗೋಶಾಲೆಯ ಮಾಲೀಕರು ರಾಜ್ಯದಾದ್ಯಂತ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ, ಕೇಜ್ರಿವಾಲ್‌ ಅವರ ಈ ಘೋಷಣೆಗಳು ಮಹತ್ವ ಪಡೆದುಕೊಂಡಿದೆ.

‘ಯಾರು ಊಟಕ್ಕೆ ಕರೆದರೂ ಹೋಗುವೆ’: ಅಹಮದಾಬಾದ್‌ನ ಆಟೊ ಚಾಲಕರೊಬ್ಬರ ಮನೆಗೆ ಕೇಜ್ರಿವಾಲ್‌ ಅವರು ರಾತ್ರಿ ಊಟಕ್ಕೆ ಹೋಗಿದ್ದರು. ಆದರೆ, ಆ ಚಾಲಕ ಬಿಜೆಪಿ ಬೆಂಬಲಿಗ ಎಂದು ನಂತರ ತಿಳಿದುಬಂದಿತು. ಈ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ‘ವ್ಯಕ್ತಿಗಳನ್ನು ಅವರು ಬೆಂಬಲಿಸುವ ಪಕ್ಷದ ಆಧಾರದಲ್ಲಿ ನಾನು ತಾರತಮ್ಯ ಮಾಡುವುದಿಲ್ಲ. ಅವರು ನನ್ನ ಪಕ್ಷಕ್ಕೆ ಮತ ನೀಡಲಿ ಬಿಡಲಿ. ಅದು ಅವರ ನಿರ್ಧಾರ. ಆದರೆ, ಯಾರೇ ನನ್ನನ್ನು ಮನೆಗೆ ಊಟಕ್ಕೆ ಕರೆದರೂ ಹೋಗುತ್ತೇನೆ’ ಎಂದರು.

ಬಿಜೆಪಿ, ಕಾಂಗ್ರೆಸ್‌ ಒಳ ಒಪ್ಪಂದ

‘ಚುನಾವಣೆಯಲ್ಲಿ ಎಎಪಿಯನ್ನು ಸೋಲಿಸಲು ಬಿಜೆಪಿ ಮತ್ತು ಕಾಂಗ್ರೆಸ್‌ ಒಳ ಒಪ್ಪಂದ ಮಾಡಿಕೊಂಡಿವೆ. ಎಎಪಿ ಮತಗಳನ್ನು ಸೆಳೆಯುವ ಕೆಲಸವನ್ನು ಕಾಂಗ್ರೆಸ್‌ಗೆ ಬಿಜೆಪಿ ನೀಡಿದೆ’ ಎಂದು ಕೇಜ್ರಿವಾಲ್‌ ದೂರಿದರು.

‘ಗುಜರಾತ್‌ನಲ್ಲಿ ಇಂದೇ ಚುನಾವಣೆ ನಡೆದರೂ ಎಎಪಿ ಸರ್ಕಾರ ರಚಿಸಲಿದೆ ಎಂದು ‘ಗುಪ್ತಚರ ಇಲಾಖೆ’ ಸರ್ಕಾರಕ್ಕೆ ವರದಿ ನೀಡಿದೆ ಎಂದು ತಿಳಿದುಬಂದಿದೆ. ಈ ವರದಿ ಬಂದಾಗಿನಿಂದ ಈ ಎರಡೂ ಪಕ್ಷಗಳೂ ಒಂದಾಗಿವೆ. ರಹಸ್ಯ ಸಭೆಗಳನ್ನು ನಡೆಸುತ್ತಿವೆ’ ಎಂದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಅನ್ನು ಬಲಿಷ್ಠಗೊಳಿಸಿ, ಬಿಜೆಪಿ ವಿರೋಧಿ ಮತಗಳನ್ನು ಒಡೆಯುವುದು ಬಿಜೆಪಿಯ ತಂತ್ರವಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್‌ 10ಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಜಯಗಳಿಸುವುದಿಲ್ಲ. ಈ ಕ್ಷೇತ್ರಗಳಲ್ಲಿ ಗೆದ್ದ ಕಾಂಗ್ರೆಸ್‌ ಶಾಸಕರು ಬಿಜೆಪಿ ಸೇರಲಿದ್ದಾರೆ. ಆದ್ದರಿಂದ ಕಾಂಗ್ರೆಸ್‌ಗೆ ಮತ ನೀಡುವುದು ನಿರರ್ಥಕ. ಬಿಜೆಪಿಯಿಂದ ಬೇಸತ್ತಿರುವವರು ಎಎಪಿಗೇ ಮತ ನೀಡಬೇಕು’ ಎಂದು ಮನವಿ ಮಾಡಿದರು.

ಕೇಜ್ರಿವಾಲ್‌ ಮೇಲೆ ನೀರಿನ ಬಾಟಲಿ ಎಸೆತ

ರಾಜ್‌ಕೋಟ್‌ನ ಗರ್ಬಾ ಕಾರ್ಯಕ್ರಮವೊಂದರಲ್ಲಿ ವ್ಯಕ್ತಿಯೊಬ್ಬರು ಅರವಿಂದ ಕೇಜ್ರಿವಾಲ್‌ ಅವರ ಮೇಲೆ ನೀರಿನ ಪ್ಲ್ಯಾಸ್ಟಿಕ್‌ ಬಾಟಲಿಯನ್ನು ಎಸೆದಿದ್ದಾರೆ. ಗರ್ಬಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರಿಗೆ ಕೇಜ್ರಿವಾಲ್‌ ಅವರು ಕೈಬೀಸುತ್ತಿದ್ದ ವೇಳೆ ಬಾಟಲಿಯನ್ನು ಎಸೆಯಲಾಗಿದೆ. ಕೇಜ್ರಿವಾಲ್‌ ಅವರ ಸುತ್ತ ಭದ್ರತಾ ಸಿಬ್ಬಂದಿ ಮತ್ತು ಪಕ್ಷದ ನಾಯಕರು ಇದ್ದರು.

‘ಬಾಟಲಿಯನ್ನು ದೂರದಿಂದ ಎಸೆಯಲಾಗಿದೆ. ಅದು ಕೇಜ್ರಿವಾಲ್‌ ಅವರ ತಲೆ ಮೇಲಿಂದ ಹಾರಿ ಬಿದ್ದಿತು. ಕೇಜ್ರಿವಾಲ್‌ ಅವರ ಮೇಲೆಯೇ ಬಾಟಲಿಯನ್ನು ಎಸೆಯಲಾಗಿದೆ ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಆದರೆ, ಇದನ್ನು ಪುಷ್ಟೀಕರಿಸಲು ನಮ್ಮ ಬಳಿ ಯಾವುದೇ ಸಾಕ್ಷ್ಯ ಇಲ್ಲ. ಆದ್ದರಿಂದ ಪೊಲೀಸರಿಗೆ ದೂರು ನೀಡಲಿಲ್ಲ’ ಎಂದು ಎಎಪಿಯ ಮಾಧ್ಯಮ ಸಂಯೋಜಕ ಸುಖನ್‌ರಾಜ್‌ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.