ADVERTISEMENT

ವಿದೇಶಿ ನೆರವು ಪಡೆಯಲು ಮಹಾರಾಷ್ಟ್ರಕ್ಕೆ ಅನುಮತಿ: ಕೇರಳ ಆಕ್ಷೇಪ

ಪಿಟಿಐ
Published 1 ಜೂನ್ 2025, 16:14 IST
Last Updated 1 ಜೂನ್ 2025, 16:14 IST
ಕೆ.ಎನ್. ಬಾಲಗೋಪಾಲ್
ಕೆ.ಎನ್. ಬಾಲಗೋಪಾಲ್   

ತಿರುವನಂತಪುರಂ: ‘ಮುಖ್ಯಮಂತ್ರಿ ಪರಿಹಾರ ನಿಧಿಗೆ ವಿದೇಶಿ ನೆರವು ಪಡೆಯಲು ಮಹಾರಾಷ್ಟ್ರಕ್ಕೆ ಅನುಮತಿ ನೀಡಿ, ಕೇರಳಕ್ಕೆ ನಿರಾಕರಿಸುವ ಮೂಲಕ ಕೇಂದ್ರ ಸರ್ಕಾರವು ಅಸಮಾನತೆ ತೋರಿದೆ. ಇದು ಒಕ್ಕೂಟ ವ್ಯವಸ್ಥೆಯ ನಿಯಮಗಳ ಸ್ಪಷ್ಟ ಉಲ್ಲಂಘನೆ’ ಎಂದು ಕೇರಳ ಸರ್ಕಾರ ಭಾನುವಾರ ಆರೋಪಿಸಿದೆ.

‘2018ರಲ್ಲಿ ಸಂಭವಿಸಿದ ಪ್ರವಾಹದ ಸಂದರ್ಭದಲ್ಲಿ ಕೇರಳ ಸರ್ಕಾರವು ವಿದೇಶಿ ನೆರವು ಪಡೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿರಲಿಲ್ಲ’ ಎಂದು ರಾಜ್ಯ ಹಣಕಾಸು ಸಚಿವ ಕೆ.ಎನ್‌.ಬಾಲಗೋಪಾಲ್‌ ದೂರಿದ್ದಾರೆ.

‘ಮಹಾರಾಷ್ಟ್ರವು ವಿದೇಶಿ ನೆರವು ಪಡೆದುಕೊಳ್ಳಲು ಕೇರಳದ ಆಕ್ಷೇಪವಿಲ್ಲ. ಆದರೆ, ದಕ್ಷಿಣ ಭಾರತದ ರಾಜ್ಯಗಳಿಗೆ ಅನುಮೋದನೆ ನೀಡಲು ನಿರಾಕರಿಸುವುದು ಸರಿಯಲ್ಲ’ ಎಂದು ಹೇಳಿದ್ದಾರೆ.

ADVERTISEMENT

‘ಕೆಲ ವಿಷಯಗಳಲ್ಲಿ ಸಮಾನ ನ್ಯಾಯ ಇರಬೇಕು. ಪ್ರತಿಯೊಬ್ಬರೂ ಕಾನೂನು ಹಾಗೂ ನ್ಯಾಯದ ನಿಯಮಗಳನ್ನು ನಿರೀಕ್ಷಿಸುತ್ತಾರೆ. ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳನ್ನು ಸಮಾನವಾಗಿ ಕಾಣಬೇಕು. ಆದರೆ, ವಿದೇಶಿ ನೆರವು ಪಡೆಯಲು ಮಹಾರಾಷ್ಟ್ರಕ್ಕೆ ಒಪ್ಪಿಗೆ ನೀಡಿ, ಕೇರಳಕ್ಕೆ ಮಾತ್ರ ಅನುಮತಿ ನೀಡದಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದಿದ್ದಾರೆ.

ಅಧಿಕೃತ ಮೂಲಗಳ ಪ್ರಕಾರ, ‘ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಯು ಮುಂಬೈನ ಮಂತ್ರಾಲಯದಲ್ಲಿ ಸ್ಥಾಪನೆಗೊಂಡಿದ್ದು, ವಿದೇಶಿ ದೇಣಿಗೆ ನಿಯಂತ್ರಣ (ಎಫ್‌ಸಿಆರ್‌ಎ) ಕಾಯ್ದೆ 2010ರಡಿ ನೋಂದಾಯಿಸಲಾಗಿದೆ. 

ಮಹಾರಾಷ್ಟ್ರ ಪರಿಹಾರ ನಿಧಿಯ ವೆಬ್‌ಸೈಟ್‌ನ ಪ್ರಕಾರ, ಮಹಾರಾಷ್ಟ್ರದಲ್ಲಿ ತೊಂದರೆಗೊಳಗಾದ ಜನರಿಗೆ ತುರ್ತು ಪರಿಹಾರ ನೀಡುವುದು ಪ್ರಮುಖ ಗುರಿಯಾಗಿದೆ. ಪ್ರವಾಹ, ಬರ, ಅಗ್ನಿ ಅವಘಡಗಳಂತಹ ಪ್ರಮುಖ ಪ್ರಾಕೃತಿಕ ವಿಕೋಪಗಳಿಂದ ಬಾಧಿತರಾದವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಣಕಾಸಿನ ನೆರವು ನೀಡಲಾಗುತ್ತದೆ. ಅಲ್ಲದೆ, ‘ಆರ್ಥಿಕವಾಗಿ ದುರ್ಬಲ ವರ್ಗ’ಕ್ಕೆ ಸೇರಿದವರು ಪ್ರಮುಖ ಕಾಯಿಲೆಗಳಿಗೆ ತುತ್ತಾದರೆ ಅವರ ಚಿಕಿತ್ಸೆಗಾಗಿ ಪರಿಹಾರ ನೀಡಲು ಅವಕಾಶವಿದೆ. ನಿರ್ದಿಷ್ಟ ಉದ್ದೇಶಕ್ಕಾಗಿ ನೋಂದಾಯಿತ ಸಂಸ್ಥೆಗಳಿಂದ ವಿದೇಶಿ ನೆರವು ಪಡೆಯಲು ಗೃಹ ವ್ಯವಹಾರಗಳ ಸಚಿವಾಲಯವು ಎಫ್‌ಸಿಆರ್‌ಎ ಪರವಾನಗಿಯನ್ನು ನೀಡುತ್ತದೆ. ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗಾಗಿ ಎನ್‌ಜಿಒ, ಟ್ರಸ್ಟ್‌ಗಳಿಂದ ವಿದೇಶಿ ನೆರವು ಪಡೆಯಲು ಈ ಪರವಾನಗಿಯು ಅವಕಾಶ ಕಲ್ಪಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.