ADVERTISEMENT

ಕೇರಳ ಕಣ: 20 ಕ್ಷೇತ್ರಗಳಲ್ಲಿ ಮಾಜಿ ಸಚಿವರು ಮತ್ತು ಶಾಸಕರ ಮಕ್ಕಳ ಸ್ಪರ್ಧೆ

ಕೇರಳ ಕಣ: ಮಕ್ಕಳು, ಅಳಿಯ, ನೆಂಟರ ದಂಡು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2021, 18:49 IST
Last Updated 26 ಮಾರ್ಚ್ 2021, 18:49 IST
ತಿರುವನಂತಪುರದಲ್ಲಿ ಚುನಾವಣಾ ಪ್ರಚಾರದಲ್ಲಿ ಸಿಎಂ ಪಿಣರಾಯಿ ವಿಜಯನ್
ತಿರುವನಂತಪುರದಲ್ಲಿ ಚುನಾವಣಾ ಪ್ರಚಾರದಲ್ಲಿ ಸಿಎಂ ಪಿಣರಾಯಿ ವಿಜಯನ್   

ತಿರುವನಂತಪುರ: ಕೇರಳ ವಿಧಾನಸಭೆ ಚುನಾವಣಾ ಕಣದಲ್ಲಿ ಹಿರಿಯ ರಾಜಕಾರಣಿಗಳ ಮಕ್ಕಳು, ಅಳಿಯಂದಿರು ಮತ್ತು ನೆಂಟರ ದೊಡ್ಡ ದಂಡೇ ಇದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಅಳಿಯ ಪಿ.ಎ. ಮೊಹಮ್ಮದ್‌ ರಿಯಾಸ್‌ ಅವರು ಬೇಪೂರ್‌ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಡಿವೈಎಫ್‌ಐನ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ರಿಯಾಸ್‌ಗೆ ಇದು ಮೊದಲ ವಿಧಾನಸಭಾ ಚುನಾವಣೆ. ಕೇರಳದ ಮಾಜಿ ಮುಖ್ಯಮಂತ್ರಿ ಕೆ. ಕರುಣಾಕರನ್‌ ಅವರ ಮಕ್ಕಳಾದ ಕೆ. ಮುರಳೀಧನ್‌ ಮತ್ತು ಪದ್ಮಜಾ ವೇಣುಗೋಪಾಲ್‌ ಅವರು ನೇಮಮ್‌ ಮತ್ತು ತ್ರಿಶ್ಶೂರ್‌ ಕ್ಷೇತ್ರದಲ್ಲಿ ಕಣದಲ್ಲಿದ್ದಾರೆ.

140 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಲ್ಲಿ ಮಾಜಿ ಸಚಿವರು ಮತ್ತು ಶಾಸಕರ ಮಕ್ಕಳು ಸ್ಪರ್ಧಿಸುತ್ತಿದ್ದಾರೆ.

ADVERTISEMENT

ಸೀಟು ಹಂಚಿಕೆಯಲ್ಲಿ ತಾರತಮ್ಯ ಆಗಿದೆ ಎಂಬುದು ಕೇರಳದಲ್ಲಿ ಪ್ರತಿಭಟನೆಗೆ ಕಾರಣವಾಗಿದೆ. ಕಾಂಗ್ರೆಸ್‌ ಮಹಿಳಾ ಮೋರ್ಚಾದ ಮಾಜಿ ಅಧ್ಯಕ್ಷೆ ಲತಿಕಾ ಸುರೇಶ್‌ ಅವರು ತಲೆ ಬೋಳಿಸಿ ಪ್ರತಿಭಟನೆ ನಡೆಸಿದ್ದರು. ಏಟುಮಾನೂರು ಕ್ಷೇತ್ರದಿಂದ ಲತಿಕಾ ಅವರಿಗೆ ಟಿಕೆಟ್‌ ನಿರಾಕರಿಸಲಾಗಿತ್ತು. ಹಾಗಾಗಿ ಅವರು ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ.

ಕಾಂಗ್ರೆಸ್‌ನ ಹಿರಿಯ ನಾಯಕಿ ಕೆ.ಸಿ.ರೋಸಾಕುಟ್ಟಿ ಅವರೂ ಪಕ್ಷ ಬಿಟ್ಟಿದ್ದಾರೆ. ಕಲ್ಪೆಟ್ಟ ಕ್ಷೇತ್ರದಲ್ಲಿ ಅವರಿಗೆ ಟಿಕೆಟ್‌ ನಿರಾಕರಿಸಲಾಗಿತ್ತು. ಎಡರಂಗದಲ್ಲಿಯೂ ಅತೃಪ್ತಿಯ ಪ್ರಮಾಣ ದೊಡ್ಡದೇ ಇದೆ.

ಮಾಜಿ ಸಚಿವ ಇಬ್ರಾಹಿಂ ಕುಂಞಿ ಅವರ ಮಗ ಪಿ.ಇ. ಅಬ್ದುಲ್‌ ಗಫೂರ್‌ (ಕಲಮಶ್ಶೇರಿ), ಕಾಂಗ್ರೆಸ್‌ನ ಮಾಜಿ ಶಾಸಕ ಕೆ. ಅಚ್ಯುತನ್‌ ಅವರ ಮಗ ಸುಮೇಶ್‌, ಎನ್‌. ವಿಜಯನ್‌ ಪಿಳ್ಳೆ ಅವರ ಮಗ ಡಾ.ಸುಜಿತ್‌ ಅವರು ಸ್ಪರ್ಧಿಸುತ್ತಿದ್ದಾರೆ.

ಕುಟ್ಟನಾಡಿನಿಂದ ಎನ್‌ಸಿಪಿ ಅಭ್ಯರ್ಥಿಯಾಗಿರುವ ಥಾಮಸ್‌ ಕೆ. ಥಾಮಸ್ ಅವರು ಮಾಜಿ ಸಚಿವ ಥಾಮಸ್‌ ಚಾಂಡಿಯ ಮಗ. ಸಿಪಿಎಂನ ಪ್ರಭಾರ ಕಾರ್ಯದರ್ಶಿ ಎ. ವಿಜಯರಾಘವನ್‌ ಅವರ ಹೆಂಡತಿ ಆರ್‌. ಬಿಂದು ಅವರು ಇರಿಞಾಲಿಕುಡದಿಂದ ಸ್ಪರ್ಧಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್‌ ಅವರ ಅಳಿಯ ಪಿ.ವಿ. ಶ್ರೀನಿಜಿನ್‌ ಅವರನ್ನು ಕುಟ್ಟನಾಡ್‌ನಿಂದ ಎಲ್‌ಡಿಎಫ್‌ ಕಣಕ್ಕೆ ಇಳಿಸಿದೆ.

ಸಂಬಂಧಿಕರನ್ನು ಕಣಕ್ಕೆ ಇಳಿಸುವ ಪ್ರವೃತ್ತಿ ಕೇರಳದಲ್ಲಿ ಹೆಚ್ಚುತ್ತಿದೆ. ಯುಡಿಎಫ್‌ನಲ್ಲಿಯೇ ಇದು ಹೆಚ್ಚು. ಹಿಂದಿನ ಯುಡಿಎಫ್‌ ಸಚಿವ ಸಂಪುಟದ ಸದಸ್ಯರಲ್ಲಿ ಆರು ಮಂದಿ ಹಿರಿಯ ರಾಜಕಾರಣಿಗಳ ಮಕ್ಕಳೇ ಇದ್ದರು ಎಂದು ರಾಜಕೀಯ ವಿಶ್ಲೇಷಕ ಮತ್ತು ವಕೀಲ ಎ. ಜಯಶಂಕರ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.