ADVERTISEMENT

ಛತ್ತೀಸಗಢ | ಬಂಧಿತ ಸನ್ಯಾಸಿನಿಯರು ಮತಾಂತರ ಮಾಡಿಲ್ಲ: ಬಿಜೆಪಿ

ಛತ್ತೀಸಗಢದಲ್ಲಿ ಕೇರಳದ ಕ್ರೈಸ್ತ ಸನ್ಯಾಸಿನಿಯರ ಸೆರೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 16:10 IST
Last Updated 29 ಜುಲೈ 2025, 16:10 IST
<div class="paragraphs"><p>ಬಿಜೆಪಿ ಧ್ವಜ</p></div>

ಬಿಜೆಪಿ ಧ್ವಜ

   

ತಿರುವನಂತಪುರ/ನವದೆಹಲಿ (ಪಿಟಿಐ): ‘ಛತ್ತೀಸಗಢದಲ್ಲಿ ಬಂಧಿತರಾಗಿರುವ ಕೇರಳದ ಇಬ್ಬರು ಕ್ಯಾಥೋಲಿಕ್‌ ಸನ್ಯಾಸಿನಿಯರು ಮಾನವ ಕಳ್ಳಸಾಗಣೆ ಮತ್ತು ಬಲವಂತದ ಮತಾಂತರದಲ್ಲಿ ಭಾಗಿಯಾಗಿಲ್ಲ’ ಎಂದು ಕೇರಳ ಬಿಜೆಪಿ ಮಂಗಳವಾರ ಪ್ರತಿಪಾದಿಸಿದೆ. 

ಸನ್ಯಾಸಿನಿಯರಾದ ಪ್ರೀತಿ ಮೇರಿ, ವಂದನಾ ಫ್ರಾನ್ಸಿಸ್‌ ಅವರನ್ನು ಬಂಧಿಸಿರುವ ಕ್ರಮವನ್ನು ಸಮರ್ಥಿಸಿಕೊಂಡು ಛತ್ತೀಸಗಢದ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ನೀಡಿದ ಹೇಳಿಕೆಗಳನ್ನು ಕೇರಳ ಬಿಜೆಪಿ ತಿರಸ್ಕರಿಸಿದೆ.  

ADVERTISEMENT

‘ಮಾನವ ಕಳ್ಳಸಾಗಣೆ ಸೇರಿದಂತೆ ಬಲವಂತದ ಮತಾಂತರ ಪ್ರಯತ್ನದಲ್ಲಿ ಸನ್ಯಾಸಿಗಳು ಭಾಗಿಯಾಗಿಲ್ಲ. ಅವರನ್ನು ಸುರಕ್ಷಿತವಾಗಿ ಮನೆಗೆ ಕರೆತರಲು ಶ್ರಮಿಸಲಾಗುತ್ತಿದೆ’ ಎಂದು ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್‌ ಚಂದ್ರಶೇಖರ್ ಹೇಳಿದರು. 

ಬಜರಂಗ ದಳದ ವರ್ತನೆ ಖಂಡನೆ: ‘ಸನ್ಯಾಸಿನಿಯರ ಜತೆಗೆ ಆಕ್ಷೇಪಾರ್ಹವಾಗಿ ನಡೆದುಕೊಂಡ ಬಜರಂಗ ದಳದ ಸದಸ್ಯರ ವರ್ತನೆ ಖಂಡನೀಯ. ಅವರ ನ್ಯಾಯಸಮ್ಮತವಲ್ಲದ ವರ್ತನೆಯನ್ನು ಪಕ್ಷ ಸಹ ಖಂಡಿಸುತ್ತದೆ’ ಎಂದು ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

‘ಬಜರಂಗ ದಳ ಸ್ವತಂತ್ರ ಸಂಘಟನೆ ಮತ್ತು ಬಿಜೆಪಿ ಒಂದು ರಾಜಕೀಯ ಪಕ್ಷ. ಯಾರಾದರೂ ತಪ್ಪು ಮಾಡಿ, ನ್ಯಾಯದ ವಿರುದ್ಧ ಹೋದರೆ ಖಂಡಿತವಾಗಿಯೂ ಅವರಿಗೆ ಶಿಕ್ಷೆಯಾಗಲೇಬೇಕು’ ಎಂದು ಅವರು ಸ್ಪಷ್ಟಪಡಿಸಿದರು. 

ಛತ್ತೀಸಗಢಕ್ಕೆ ನಿಯೋಗ: ಸನ್ಯಾಸಿನಿಯರಿಗೆ ಸಹಾಯ ಮಾಡಲು ಕೇರಳ ಬಿಜೆಪಿಯ ನಿಯೋಗ ಮತ್ತು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ನ ಸಂಸದರ ನಿಯೋಗ ಪ್ರತ್ಯೇಕವಾಗಿ ಮಂಗಳವಾರ ಛತ್ತೀಸಗಢ ತಲುಪಿವೆ. 

ಬಿಜೆಪಿಯ ಕೇರಳ ಘಟಕದ ಪ್ರಧಾನ ಕಾರ್ಯದರ್ಶಿ ಅನೂಪ್‌ ಆ್ಯಂಟೊನಿ ಜೋಸೆಫ್‌ ನೇತೃತ್ವದ ತಂಡವು  ಛತ್ತೀಸಗಢದ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರೂ ಆಗಿರುವ ವಿಜಯ್ ಶರ್ಮಾ ಅವರನ್ನು ಮಂಗಳವಾರ ಭೇಟಿ ಮಾಡಿ ಮಾತುಕತೆ ನಡಿಸಿತು.

ಸನ್ಯಾಸಿಗಳನ್ನು ಭೇಟಿ ಮಾಡಿದ ಯುಡಿಎಫ್‌:

ಬೆನ್ನಿ ಬೆಹನ್ನನ್‌, ಫ್ರಾನ್ಸಿಸ್‌ ಜಾರ್ಜ್‌ ಮತ್ತು ಎನ್‌.ಕೆ.ಪ್ರೇಮಚಂದ್ರನ್‌ ಅವರನ್ನು ಒಳಗೊಂಡ ಯುಡಿಎಫ್‌ ಸಂಸದರ ನಿಯೋಗವು ಛತ್ತೀಸಗಢದ ದುರ್ಗ್‌ನಲ್ಲಿನ ಕೇಂದ್ರ ಕಾರಾಗೃಹದಲ್ಲಿ ಸನ್ಯಾಸಿಯರನ್ನು ಭೇಟಿ ಮಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.