ತಿರುವನಂತಪುರ: ಕೊಟ್ಟಾಯಂ ವೈದ್ಯಕೀಯ ಕಾಲೇಜಿನ ಕಟ್ಟಡ ಕುಸಿದು ಮೃತಪಟ್ಟಿದ್ದ ಮಹಿಳೆಯ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಲಾಗುವುದು ಮತ್ತು ಮೃತ ಮಹಿಳೆಯ ಮಗನಿಗೆ ಸೂಕ್ತ ಕೆಲಸ ನೀಡುವಂತೆ ತಿರುವಾಂಕೂರು ದೇವಸ್ವಂ ಮಂಡಳಿಗೆ (ಟಿಡಿಬಿ) ಶಿಫಾರಸು ಮಾಡಲಾಗುವುದು ಎಂದು ಕೇರಳ ಸರ್ಕಾರ ತಿಳಿಸಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಯಿಂದ ಆರ್ಥಿಕ ನೆರವು ನೀಡುವ ಬಗ್ಗೆ ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಕೊಟ್ಟಾಯಂ ಸರ್ಕಾರಿ ವೈದ್ಯಕೀಯ ಕಾಲೇಜಿನ ಶೌಚಾಲಯ ಸಂಕೀರ್ಣ ಜುಲೈ 3ರಂದು ಕುಸಿದು ಬಿದ್ದು, ಬಿಂದು (52) ಎಂಬುವವರು ಮೃತಪಟ್ಟಿದ್ದರು. ಈ ವೇಳೆ ಬಾಲಕಿ ಸೇರಿ ಮೂವರು ಗಾಯಗೊಂಡಿದ್ದು, ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಪತ್ರೆಯಲ್ಲಿ ಹೊಸದಾಗಿ ನಿರ್ಮಿಸಲಾದ ಶಸ್ತ್ರಚಿಕಿತ್ಸಾ ಬ್ಲಾಕ್‌ಗೆ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಳಾಂತರಿಸುವ ಪ್ರಕ್ರಿಯೆಯಲ್ಲಿದ್ದಾಗಲೇ ಈ ದುರಂತ ಸಂಭವಿಸಿತ್ತು.
ಮಹಿಳೆ ಮೃತಪಟ್ಟ ಘಟನೆಯ ಹೊಣೆ ಹೊತ್ತು, ಆರೋಗ್ಯ ಸಚಿವೆ ವೀಣಾ ಜಾರ್ಜ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನೇೃತ್ವದ ಯುಡಿಎಫ್‌ನ ಮಿತ್ರ ಪಕ್ಷಗಳು ಮತ್ತು ಬಿಜೆಪಿಯ ವಿವಿಧ ವಿಭಾಗಗಳಿಂದ ರಾಜ್ಯವ್ಯಾಪಿ ಪ್ರತಿಭಟನೆಗಳು ನಡೆಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.