ADVERTISEMENT

ಹವಾಲ ಪ್ರಕರಣ: ಕೇರಳ ವಿಧಾನಸಭೆಯಲ್ಲಿ ಕೋಲಾಹಲ

ಪಿಟಿಐ
Published 26 ಜುಲೈ 2021, 15:34 IST
Last Updated 26 ಜುಲೈ 2021, 15:34 IST
ಪಿಣರಾಯಿ ವಿಜಯನ್‌
ಪಿಣರಾಯಿ ವಿಜಯನ್‌   

ತಿರುವನಂತಪುರ: ಕೊಡಕರ ಹವಾಲ ಪ್ರಕರಣದ ತನಿಖೆಯ ವಿಚಾರವಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಸದಸ್ಯರ ನಡುವೆ ನಡೆದ ವಾಗ್ವಾದಕ್ಕೆ ಕೇರಳ ವಿಧಾನಸಭೆಯ ಅಧಿವೇಶನ ಸೋಮವಾರ ಸಾಕ್ಷಿಯಾಯಿತು.

ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾದ ಬಿಜೆಪಿ ನಾಯಕರನ್ನು ರಕ್ಷಿಸಲು ಎಲ್‌ಡಿಎಫ್‌ ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿ ವಿರೋಧಪಕ್ಷದ ಸದಸ್ಯರು ಕಲಾಪದಿಂದ ಹೊರನಡೆದರು.

ಬಿಜೆಪಿಯ ಕೆಲವು ನಾಯಕರು ಹಣ ಅಕ್ರಮ ವರ್ಗಾವಣೆಯ ಸೂತ್ರರಾಗಿದ್ದರೂ ಕೇರಳ ಪೊಲೀಸರು ಅವರನ್ನು ಸಾಕ್ಷಿಗಳ ಪಟ್ಟಿಯಲ್ಲಿ ಸೇರಿಸಿ ಈಚೆಗೆ ಸ್ಥಳೀಯ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ ಎಂದು ಆರೋಪಿಸಿದ ವಿರೋಧಪಕ್ಷದ ಸದಸ್ಯರು, ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ಬಹುಕೋಟಿ ಹವಾಲ ಪ್ರಕರಣದ ತನಿಖೆಯನ್ನು ಬುಡಮೇಲು ಮಾಡಲು ಬಿಜೆಪಿ ಮತ್ತು ಸಿಪಿಎಂನವರು ಪ್ರಯತ್ನಿಸುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ.

ವಿರೋಧ ಪಕ್ಷದ ಆರೋಪಗಳನ್ನು ತಳ್ಳಿಹಾಕಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ‘ವಿರೋಧ ಪಕ್ಷವು ಉದ್ದೇಶಪೂರ್ವಕವಾಗಿ ಸತ್ಯವನ್ನು ಮರೆಮಾಚಲು ಪ್ರಯತ್ನಿಸುತ್ತಿದೆ ಮತ್ತು ಜನರ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಿದೆ’ ಎಂದಿದ್ದಾರೆ.

ಕೊಡಕರದಲ್ಲಿ ಹಣ ದರೋಡೆ ಪ್ರಕರಣ ಬೆಳಕಿಗೆ ಬಂದ ಬಳಿಕ ವಿಧಾನಸಭಾ ಚುನಾವಣೆಗಾಗಿ ಭಾರಿ ಮೊತ್ತದ ಹಣ ಹರಿದು ಬಂದಿದೆ ಎಂದು ಆರೋಪಿಸಲಾಗಿತ್ತು. ಬಿಜೆಪಿಯ ರಾಜ್ಯ ಘಟಕ ಅಧ್ಯಕ್ಷ ಕೆ. ಸುರೇಂದ್ರನ್‌ ಸೇರಿದಂತೆ 17 ಮಂದಿ ಬಿಜೆಪಿ ನಾಯಕರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.