ADVERTISEMENT

ಕೇರಳ ಕಾಂಗ್ರೆಸ್ (ಎಂ) ಅಧ್ಯಕ್ಷ ಕೆ.ಎಂ.ಮಾಣಿ ನಿಧನ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 12:15 IST
Last Updated 9 ಏಪ್ರಿಲ್ 2019, 12:15 IST
ಕೆ.ಎಂ. ಮಾಣಿ (ಸಂಗ್ರಹ ಚಿತ್ರ)
ಕೆ.ಎಂ. ಮಾಣಿ (ಸಂಗ್ರಹ ಚಿತ್ರ)   

ಕೊಚ್ಚಿ: ಹಿರಿಯ ರಾಜಕಾರಣಿಕೇರಳ ಕಾಂಗ್ರೆಸ್ (ಎಂ) ಅಧ್ಯಕ್ಷ, ಕೇರಳದ ಮಾಜಿ ವಿತ್ತ ಸಚಿವ ಕೆ.ಎಂ.ಮಾಣಿ (86) ಮಂಗಳವಾರ ನಿಧನರಾಗಿದ್ದಾರೆ.ಶ್ವಾಸಕೋಶ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಂಜೆ 5 ಗಂಟೆಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉಸಿರಾಟ ತೊಂದರೆ ತೀವ್ರವಾದ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೇರಳ ವಿದಾನಸಭೆಯಲ್ಲಿ 50 ವರ್ಷಗಳ ಕಾಲ ಸೇವೆ ಸಲ್ಲಿಸಿದ ಖ್ಯಾತಿಯ ರಾಜಕಾರಣಿಯಾಗಿದ್ದಾರೆ ಮಾಣಿ.

ಮೀನಾಚ್ಚಿಲ್ ತಾಲ್ಲೂರಿನ ಮರಂಞಾಡುಪಿಳ್ಳದ ಕರಿಙೊಳಕ್ಕಲ್ ತೊಮ್ಮನ್ ಮಾಣಿ- ಎಲಿಯಾಮ್ಮ ದಂಪತಿಗಳ ಪುತ್ರನಾಗಿ 1933ರಲ್ಲಿ ಜನಿಸಿದ ಮಾಣಿ, 1955ರಲ್ಲಿ ಕಾನೂನು ಪದವಿ ಗಳಿಸಿದ್ದರು. ಆಮೇಲೆ ರಾಜಕೀಯ ಪ್ರವೇಶಿಸಿದ ಇವರು ಕಾಂಗ್ರೆಸ್ ಮಂಡಳಿ ಅಧ್ಯಕ್ಷರಾದರು.1959ರಲ್ಲಿ ಕೆಪಿಸಿಸಿ ಸದಸ್ಯರಾದ ಇವರು ಕೇರಳ ಕಾಂಗ್ರೆಸ್ರೂಪೀಕರಣವಾಗುವವರೆಗೆಕೆಪಿಸಿಸಿ ಸದಸ್ಯರಾಗಿಯೇ ಉಳಿದಿದ್ದರು.1964ರಲ್ಲಿ ಕೋಟ್ಟಯಂ ಡಿಸಿಸಿ ಕಾರ್ಯದರ್ಶಿಯಾದರು.ಅದೇ ವರ್ಷ ಪಿ.ಟಿ.ಚಾಕೊ ನಿಧನರಾದರು.

ADVERTISEMENT

ಕಾಂಗ್ರೆಸ್ ಪಕ್ಷ ಚಾಕೊ ಅವರಿಗೆ ಮೋಸ ಮಾಡಿದೆ ಎಂದು ಆರೋಪಿಸಿ ಕೆ.ಎಂ. ಜಾರ್ಜ್ ನೇತೃತ್ವದಲ್ಲಿ 15 ಶಾಸಕರು ಕಾಂಗ್ರೆಸ್ ತೊರೆದರು. 1964ರಲ್ಲಿ ತಿರುನಕ್ಕರದಲ್ಲಿ ಮನ್ನತ್ತು ಪದ್ಮನಾಭನ್ ಕೇರಳ ಕಾಂಗ್ರೆಸ್ ಪಕ್ಷ ಹುಟ್ಟುಹಾಕಿದರು.ಕೋಟ್ಟಯಂ ಡಿಸಿಸಿ ಕೇರಳ ಕಾಂಗ್ರೆಸ್‌ನ ಜಿಲ್ಲಾ ಸಮಿತಿಯಾಗಿ ಬದಲಾಯಿತು.

ಅತೀ ಹೆಚ್ಚು ಕಾಲ ಶಾಸಕರಾಗಿದ್ದ ದಾಖಲೆ 2014 ಮಾರ್ಚ್ 12ರಲ್ಲಿಯೇ ಮಾಣಿಯವರ ಮುಡಿಯೇರಿತ್ತು.ತಿರುವನಂತಪುರಂ- ಕೊಚ್ಚಿ ವಿಧಾನಸಭಾ ಸದಸ್ಯೆಯಾಗಿದ್ದ ಕೆ. ಆರ್. ಗೌರಿಯಮ್ಮ ಅವರ ದಾಖಲೆಯನ್ನು ಮಾಣಿ ಮುರಿದಿದ್ದರು.ಕೇರಳದಲ್ಲಿ ಅತೀ ಹೆಚ್ಚು ಅವಧಿ ಸಚಿವ (23 ವರ್ಷ ), ಅತೀ ಹೆಚ್ಚು ಬಾರಿ ಸಚಿವ ಸಂಪುಟದಲ್ಲಿ ಸದಸ್ಯ (12 ಬಾರಿ) ರಾಗಿದ್ದರು ಮಾಣಿ.13 ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಮತ್ತು ಹೆಚ್ಚು ಬಾರಿ ಸಚಿವರಾಗಿದ್ದ (7 ಬಾರಿ) ದಾಖಲೆಯೂ ಮಾಣಿ ಹೆಸರಿನಲ್ಲಿಯೇಇದೆ.

ಕೇರಳದಲ್ಲಿ 12 ಬಾರಿ ಬಜೆಟ್ ಮಂಡಿಸಿದ ವಿತ್ತ ಸಚಿವ, 11 ವರ್ಷಗಳ ಕಾಲ ವಿತ್ತ ಸಚಿವಾಲಯ ಮತ್ತು 20 ವರ್ಷ ಕಾನೂನು ಸಚಿವಾಲಯದ ಜವಾಬ್ದಾರಿ ನಿರ್ವಹಿಸಿದ ಸಚಿವ ಎಂಬ ಹೆಗ್ಗಳಿಕೆಯೂ ಇವರಿಗಿದೆ.ಒಂದೇ ಚುನಾವಣಾ ಕ್ಷೇತ್ರದಿಂದ ಹೆಚ್ಚು ಸಲ ಜಯಗಳಿಸಿದ ಶಾಸಕ ಎಂಬ ಬಿರುದು ಕೂಡಾ ಪಾಲಾ ಕ್ಷೇತ್ರದ ಮಾಣಿಯವರ ಹೆಸರಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.