ADVERTISEMENT

ಕೇರಳ ಜಲಪ್ರಳಯ: ಕೊಚ್ಚಿಯಲ್ಲಿ ಪ್ರಧಾನಿ ಮೋದಿ ತುರ್ತು ಸಭೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2018, 4:25 IST
Last Updated 18 ಆಗಸ್ಟ್ 2018, 4:25 IST
ನೆರವಿನ ನಿರೀಕ್ಷೆಯಲ್ಲಿ ಮನೆಯ ಮಹಡಿಯ ಮೇಲೆ ಕಾದು ನಿಂತಿರುವ ಜನ
ನೆರವಿನ ನಿರೀಕ್ಷೆಯಲ್ಲಿ ಮನೆಯ ಮಹಡಿಯ ಮೇಲೆ ಕಾದು ನಿಂತಿರುವ ಜನ   

ಕೊಚ್ಚಿ: ಕೇರಳದ ಜಲಪ್ರಳಯ ಪರಿಸ್ಥಿತಿ ಜನಜೀವನವನ್ನು ಅಪಾಯದ ಅಂಚಿನಲ್ಲಿ ಸಿಲುಕಿಸಿದೆ. ರಕ್ಷಣಾ ಕಾರ್ಯಾಚರಣೆ ನಡೆಸಲು ರಕ್ಷಣಾ ಪಡೆ ಸದಸ್ಯರು ನೆರೆ ಪೀಡಿತ ಸ್ಥಳಗಳಿಗೆ ತಲುಪುವುದೇ ದುಸ್ಥರವಾಗಿದೆ. ಮನೆಯಿಂದ ಹೊರಬರಲಾರದೆ ಸಿಲುಕಿರುವ ಜನರು ಆಹಾರ ಪದಾರ್ಥಗಳ ನಿರೀಕ್ಷೆಯಲ್ಲಿ ಆಗಸಕ್ಕೆ ಮುಖಮಾಡಿ ಮೊರೆಯಿಡುತ್ತಿದ್ದಾರೆ. ಪೊಲೀಸರು ಹಾಗೂ ರಕ್ಷಣಾ ತಂಡದ ವಾಹನಗಳು ಕೆಸರಿನಲ್ಲಿ ಸಿಲುಕಿವೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶೇಷ ವಿಮಾನದ ಮೂಲಕ ಕೊಚ್ಚಿ ಪ್ರವೇಶಿಸಿದ್ದಾರೆ.

ಪ್ರಧಾನಿಯವರ ವೈಮಾನಿಕ ಸಮೀಕ್ಷೆ ರದ್ದುಗೊಂಡಿರುವ ಬಗ್ಗೆ ಕೆಲ ಮಾಧ್ಯಮಗಳು ವರದಿ ಮಾಡಿವೆ. ಪ್ರಸ್ತುತ ಕೊಚ್ಚಿಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರೊಂದಿಗೆ ಪ್ರಧಾನಿ ಮೋದಿ ಸಭೆಯ ನೇತೃತ್ವ ವಹಿಸಿದ್ದಾರೆ. ಕೇಂದ್ರ ಸಚಿವ ಕೆ.ಜೆ.ಆಲ್ಫನ್ಸ್ ಹಾಗೂ ಇತರ ಅಧಿಕಾರಿಗಳು ಪ್ರವಾಹ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದ್ದಾರೆ.

ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಭೀತಿ ಹೆಚ್ಚುತ್ತಲೇ ಇದ್ದು, ನೆರೆಯ ಪರಿಣಾಮ ಆಗಸ್ಟ್‌ 8ರಿಂದ ಈ ವರೆಗೂ 165 ಮಂದಿ ಸಾವಿಗೀಡಾಗಿದ್ದಾರೆ. ಪಶ್ಚಿಮ ಘಟ್ಟಗಳಿಗೆ ಸೇರಿರುವ ಇಡುಕ್ಕಿ ಜಿಲ್ಲೆಗೆ ಮೂರನೇ ದಿನವೂ ಸಂಪರ್ಕ ಸಾಧ್ಯವಾಗದೆ, ರಕ್ಷಣಾ ಪಡೆಗಳಿಗೂ ಜನರ ಸಂಕಷ್ಟಕ್ಕೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಬುಧವಾರದಿಂದಲೂ ಹೊರ ಜಗತ್ತಿನೊಂದಿಗೆ ಸಂಪೂರ್ಣ ಸಂಪರ್ಕ ಕಡಿತಗೊಂಡಿರುವ ಇಡುಕ್ಕಿಯಲ್ಲಿ ಸರಣಿ ಭೂಕುಸಿತ ಸಂಭವಿಸಿವೆ.

ADVERTISEMENT

ಜಿಲ್ಲಾ ಕೇಂದ್ರಗಳಲ್ಲಿ ಹ್ಯಾಮ್‌ ರೇಡಿಯೊ ವ್ಯವಸ್ಥೆ ಮಾಡಲಾಗಿದ್ದು, ಅಧಿಕೃತ ಮಾಹಿತಿ ಹಂಚಿಕೆ ಇದರಿಂದ ಸಾಧ್ಯವಾಗಿದೆ. ನೀರಿನ ಮಟ್ಟ, ರಕ್ಷಣಾ ಪಡೆಯ ಕಾರ್ಯಾಚರಣೆ ಮಾಹಿತಿ ಇದರಿಂದ ಹಂಚಿಕೊಳ್ಳಲಾಗುತ್ತಿದೆ. ರಸ್ತೆ ಮಾರ್ಗ ಹಾಗೂ ದೂರವಾಣಿ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿವೆ. ಔಷಧಿ ಹಾಗೂ ಅಗತ್ಯ ಆಹಾರ ಪದಾರ್ಥಗಳನ್ನು ತಲುಪಿಸುವುದು ಸವಾಲಿನ ಕಾರ್ಯವಾಗಿದೆ. 100ಕ್ಕೂ ಹೆಚ್ಚು ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ, ನೂರಾರು ಮಂದಿಗೆ ವೈದ್ಯಕೀಯ ನೆರವು ತುರ್ತು ಅಗತ್ಯವಿರುವುದಾಗಿ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಹೆಲಿಕಾಪ್ಟರ್‌ ಸಹಕಾರಿ ನೀಡಿ, ಏರ್‌ ಲಿಫ್ಟ್‌ ಮೂಲಕ ಜನರನ್ನು ರಕ್ಷಣಿಸಿ ಎಂದು ಕಣ್ಣೀರು ಸುರಿಸಿ ಚೆಂಗನ್ನೂರಿನ ಶಾಸಕ ಸಜಿ ಚೆರಿಯಾನ್ ಪ್ರಧಾನಿಗೆ ಶುಕ್ರವಾರ ಮೊರೆಯಿಟ್ಟಿದ್ದರು. ತಮ್ಮನ್ನು ಸೇನೆಯ ಹೆಲಿಕಾಪ್ಟರ್‌ಗಳು ಬಂದು ರಕ್ಷಿಸುತ್ತವೆ ಎಂಬ ಭರವಸೆಯಲ್ಲಿ ಮನೆಯ ಮಹಡಿಯಲ್ಲಿ, ಗುಡ್ಡದ ತುದಿಯಲ್ಲಿ ಜನರು ಕಾಯುತ್ತಿರುವುದು ಸಾಮಾನ್ಯವಾಗಿದೆ.

ಇಂಧನ ಕೊರತೆ, ವಿದ್ಯುತ್‌ ಸಂಪರ್ಕ ಕಡಿತದಿಂದಾಗಿ ರಕ್ಷಣಾ ಕಾರ್ಯಕ್ಕೆ ಹೊಡೆತ ಬಿದ್ದಿದೆ. ಪ್ರಮುಖ ಪ್ರವಾಸಿ ಸ್ಥಳಗಳಾಗಿರುವ ಮುನ್ನಾರ್ ಮತ್ತು ತೇಕ್ಕಡಿಯಲ್ಲಿ ನೂರಾರು ಜನರು ಸಿಲುಕಿದ್ದಾರೆ. ಕುಲಮಾವು ಮತ್ತು ಚೆರುಥೊನಿ ಡ್ಯಾಂಗಳಿಂದ 26 ವರ್ಷಗಳಲ್ಲಿ ಮೊದಲ ಬಾರಿಗೆ ನೀರು ಹರಿಸಲಾಗಿದೆ. ಇದರಿಂದಾಗಿ ಹಲವೆಡೆ ಅಚಾನಕ್‌ ಪ್ರಳಯ ಸೃಷ್ಟಿಯಾಗಿದೆ. ಕೇರಳದ ಕೋಥಮಂಗಲಂ ಹಾಗೂ ತಮಿಳುನಾಡಿನ ಕುಂಬಮ್‌ ಪ್ರಮುಖ ರಸ್ತೆ ಮಾರ್ಗಗಳು ಭೂಕುಸಿತದಿಂದಾಗಿ ಬಂದ್‌ ಆಗಿವೆ. ಮೀನ್‌ಮುಟ್ಟಿ ಅಣೆಕಟ್ಟೆಯು ಕೂಡ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.