ADVERTISEMENT

ಅದಾನಿಗೆ ಲಾಭಮಾಡಿಕೊಡಲು ವಿದ್ಯುತ್‌ ದರ ಏರಿಕೆ: ಕಾಂಗ್ರೆಸ್‌ ಆರೋಪ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2024, 13:15 IST
Last Updated 7 ಡಿಸೆಂಬರ್ 2024, 13:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರ: ‘ಕೇರಳ ಸರ್ಕಾರವು ವಿದ್ಯುತ್‌ ದರ ಏರಿಕೆ ಮಾಡಿ, ಅದಾನಿಗೆ ಲಾಭ ಮಾಡಿಕೊಳ್ಳಲು ನೆರವಾಗುತ್ತಿದೆ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ರಮೇಶ್‌ ಚೆನ್ನಿತ್ತಲ ಆರೋಪಿಸಿದ್ದಾರೆ.

‘ಯುಡಿಎಫ್‌ ಸರ್ಕಾರದ ಅವಧಿಯಲ್ಲಿ ಪ್ರತಿ ಯೂನಿಟ್‌ಗೆ ₹5 ದರದಲ್ಲಿ ವಿದ್ಯುತ್‌ ಉತ್ಪಾದನಾ ಕಂಪನಿಗಳೊಂದಿಗೆ ’ದೀರ್ಘಾವಧಿಗೆ ವಿದ್ಯುತ್‌ ಖರೀದಿಯ ಒಪ್ಪಂದ’ ಮಾಡಿಕೊಳ್ಳಲಾಗಿತ್ತು. ಎಲ್‌ಡಿಎಫ್‌ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ಈ ಒಪ್ಪಂದ ರದ್ದುಗೊಳಿಸಿ, ವ್ಯವಸ್ಥೆಯ ಒಳಗೆ ಅದಾನಿ ಪ್ರವೇಶಕ್ಕೆ ದಾರಿ ಮಾಡಿಕೊಟ್ಟಿತು’ ಎಂದು ಅವರು ಆರೋಪಿಸಿದರು.

‘2024–25ನೇ ಆರ್ಥಿಕ ವರ್ಷದಲ್ಲಿ ಪ್ರತಿ ಯೂನಿಟ್‌ಗೆ 16 ಪೈಸೆ ದರ ಏರಿಕೆ ಮಾಡಲಾಗುವುದು ಎಂದು ಕೇರಳ ಸರ್ಕಾರ ಘೋಷಿಸಿದೆ. ನಂತರದ ವರ್ಷದಲ್ಲಿ ಹೆಚ್ಚುವರಿಯಾಗಿ 12 ಪೈಸೆ ಏರಿಕೆಯಾಗಲಿದೆ ಎಂದು ತಿಳಿಸಿದೆ. ಸರ್ಕಾರದ ಈ ನಡೆಯು ವಿದ್ಯುತ್‌ ಉತ್ಪಾದಿಸುವವರ ಕೈಗೊಂಬೆಯಂತೆ ವರ್ತಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅದರಲ್ಲೂ ವಿಶೇಷವಾಗಿ ‘ಅದಾನಿ’ ಪರವಾಗಿದೆ‘ ಎಂದು ಚೆನ್ನಿತ್ತಲ ದೂರಿದರು. 

ADVERTISEMENT

‘ಈ ನಡೆಯಿಂದ ಅದಾನಿ ಸಂಸ್ಥೆಯು ದೊಡ್ಡದಾಗಿ ಲಾಭ ಪಡೆಯಲಿದೆ. ಕೇರಳದಲ್ಲಿ ವಿದ್ಯುತ್‌ ಖರೀದಿ ವ್ಯವಸ್ಥೆಯ ಒಳಗಡೆ ಅದಾನಿಯನ್ನು ಕರೆತರುವುದೇ ಸರ್ಕಾರದ ಉದ್ದೇಶವಾಗಿದೆ. ಇದರಿಂದ ಪ್ರತಿ ಯೂನಿಟ್‌ ವಿದ್ಯುತ್‌ ಅನ್ನು ₹10ರಿಂದ ₹14ಕ್ಕೆ ಖರೀದಿಸಲಿದೆ. ಯುಡಿಎಫ್‌ ಸರ್ಕಾರ ಮಾಡಿಕೊಂಡಿದ್ದ ಖರೀದಿ ಒಪ್ಪಂದ ರದ್ದುಪಡಿಸಲು ಸಿಪಿಎಂ ಪಕ್ಷದ ಜೊತೆಗೆ ನಿಕಟ ಸಂಪರ್ಕ ಹೊಂದಿರುವ ವಿದ್ಯುತ್‌ ನಿಯಂತ್ರಣ ಆಯೋಗದ ಕೆಲವು ಅಧಿಕಾರಿಗಳು ಕಾರಣ’ ಎಂದು ಆರೋಪಿಸಿದರು.

ಸಮರ್ಥನೆ: ‘ಮಾಸಿಕ 40 ಯೂನಿಟ್‌ಗಿಂತ ಹೆಚ್ಚು ವಿದ್ಯುತ್‌ ಬಳಸುವವರಿಗೆ ಬೆಲೆ ಏರಿಕೆ ಅನ್ವಯವಾಗಲಿದೆ. ಸಿಂಗಲ್ ಫೇಸ್‌ ಮತ್ತು ತ್ರಿ–ಫೇಸ್‌ಗೆ ನಿಗದಿತ ಶುಲ್ಕದಲ್ಲಿ ಏರಿಕೆ ಮಾಡಲಾಗಿದೆ. ಕನಿಷ್ಠ ಪ್ರಮಾಣದಲ್ಲಿ ದರ ಏರಿಕೆ ಮಾಡಿದ್ದು, ಇದರಿಂದ ಜನಸಾಮಾನ್ಯರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಕೇರಳದ ಇಂಧನ ಸಚಿವ ಕೆ.ಕೃಷ್ಣಕುಟ್ಟಿ ತಿಳಿಸಿದ್ದಾರೆ.

ಸರ್ಕಾರದ ಈ ನಿರ್ಧಾರವನ್ನು ರಾಜ್ಯ ಕಾಂಗ್ರೆಸ್‌ ಘಟಕವು ತೀವ್ರವಾಗಿ ಖಂಡಿಸಿದೆ. ಬೆಲೆ ಏರಿಕೆ ಖಂಡಿಸಿ, ಶನಿವಾರ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಲಾಗಿದೆ ಎಂದು ರಾಜ್ಯ ಘಟಕದ ಅಧ್ಯಕ್ಷ ಕೆ. ಸುಧಾಕರನ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.