ADVERTISEMENT

ಐಟಿಐ ವಿದ್ಯಾರ್ಥಿನಿಯರಿಗೆ 2 ದಿನ ಮುಟ್ಟಿನ ರಜೆ ಘೋಷಿಸಿದ ಕೇರಳ ಸರ್ಕಾರ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2024, 13:37 IST
Last Updated 28 ನವೆಂಬರ್ 2024, 13:37 IST
ಮುಟ್ಟಿನ ದಿನಗಳ ಬಗ್ಗೆ ಅರಿವಿರಲಿ...
ಮುಟ್ಟಿನ ದಿನಗಳ ಬಗ್ಗೆ ಅರಿವಿರಲಿ...   

ತಿರುವನಂತಪುರ: ಕೈಗಾರಿಕಾ ತರಬೇತಿ ಸಂಸ್ಥೆಯ(ಐಟಿಐ) ವಿದ್ಯಾರ್ಥಿನಿಯರಿಗೆ ತಿಂಗಳಿಗೆ ಎರಡು ದಿನ ಮುಟ್ಟಿನ ರಜೆ ನೀಡುವ ಐತಿಹಾಸಿಕ ಘೋಷಣೆಯನ್ನು ಕೇರಳ ಸರ್ಕಾರ ಮಾಡಿದೆ.

ರಾಜ್ಯದ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ದೈಹಿಕ ಶ್ರಮ ಬೇಡುವ ಬಹಳಷ್ಟು ಕೌಶಲಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿದ್ದಾರೆ. ಈ ಯುಗದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಈ ಅಂಶಗಳನ್ನು ಪರಿಗಣಿಸಿ ಐಟಿಐ ವಿದ್ಯಾರ್ಥಿನಿಯರಿಗೆ ಪ್ರತಿ ತಿಂಗಳು ಎರಡು ದಿನಗಳ ಮುಟ್ಟಿನ ರಜೆ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇರಳದ 100ಕ್ಕೂ ಅಧಿಕ ಐಟಿಐ ಕಾಲೇಜುಗಳಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿನಿಯರಿಗೆ ಈ ಅನುಕೂಲ ಸಿಗಲಿದೆ. ಎಷ್ಟು ಮಂದಿ ವಿದ್ಯಾರ್ಥಿನಿಯರಿದ್ದಾರೆ ಎಂಬ ಮಾಹಿತಿ ಕಲೆಹಾಕುತ್ತಿರುವುದಾಗಿ ಅವರು ಹೇಳಿದ್ದಾರೆ.

ADVERTISEMENT

ಕಳೆದ ವರ್ಷ, ಕೇರಳದ ಉನ್ನತ ಶಿಕ್ಷಣ ಇಲಾಖೆಯು ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ನೀಡಿ ಆದೇಶ ಹೊರಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.