ADVERTISEMENT

ಕೇರಳ: ಎಡಪಕ್ಷಗಳಲ್ಲಿ ಆಂತರಿಕ ಸ್ಫೋಟ

‘ಪಿ.ಎಂ.ಶ್ರೀ ಶಾಲಾ ಯೋಜನೆ’ಗೆ ಸೇರಲು ಕೇರಳ ಸರ್ಕಾರ– ಕೇಂದ್ರ ಸರ್ಕಾರ ಒಪ್ಪಂದ

ಪಿಟಿಐ
Published 24 ಅಕ್ಟೋಬರ್ 2025, 15:44 IST
Last Updated 24 ಅಕ್ಟೋಬರ್ 2025, 15:44 IST
ಕಮ್ಯೂನಿಷ್ಟ್ ಪಕ್ಷ
ಕಮ್ಯೂನಿಷ್ಟ್ ಪಕ್ಷ   

ತಿರುವನಂತಪುರ (ಕೇರಳ): ಕೇಂದ್ರ ಸರ್ಕಾರ ಪ್ರಾಯೋಜಿತ ‘ಪಿ.ಎಂ.ಶ್ರೀ ಶಾಲಾ ಯೋಜನೆ’ಗೆ ಸೇರ್ಪಡೆಯಾಗಲು ಕೇರಳದ ಶಾಲಾ ಶೈಕ್ಷಣಿಕ ಇಲಾಖೆ ಒಪ್ಪಿಗೆ ಸೂಚಿಸಿರುವುದು ರಾಜ್ಯದ ಎಡಪಕ್ಷಗಳ ನೇತೃತ್ವದ ಸರ್ಕಾರದಲ್ಲಿ ಆಂತರಿಕ ಕಲಹಕ್ಕೆ ಕಾರಣವಾಗಿದೆ. ಎಲ್‌ಡಿಎಫ್‌ ಒಕ್ಕೂಟದಲ್ಲಿ ಸಿಪಿಐ ಎರಡನೇ ಅತೀ ದೊಡ್ಡ ಮೈತ್ರಿ ಪಕ್ಷವಾಗಿದ್ದು, ಶಿಕ್ಷಣ ಖಾತೆ ಹೊಂದಿರುವ ಸಿಪಿಐ(ಎಂ) ನಿಲುವಿನಿಂದ ಅಸಮಾಧಾನಗೊಂಡಿದೆ.

ಕೇಂದ್ರ ಸರ್ಕಾರದ ಜೊತೆಗೆ ಶಿಕ್ಷಣ ಇಲಾಖೆಯು ತಿಳಿವಳಿಕೆ ಒಪ್ಪಂದ ಮಾಡಿಕೊಂಡಿರುವುದು ‘ಸ್ವಯಂ ಗೋಲು ಗಳಿಸಿದಂತೆ’ ಎಂದು ಸಿಪಿಐ ಸಂಸದ ಪಿ.ಸಂತೋಷ್‌ ಕುಮಾರ್‌ ಟೀಕಿಸಿದ್ದಾರೆ.

‘ತಲೆ ಮೇಲೆ ಟವಲ್‌ ಹಾಕಿಕೊಂಡು ಒಪ್ಪಂದಕ್ಕೆ ಸಹಿ ಹಾಕಿದವರು ಈ ಕುರಿತು ಪ್ರಶ್ನೆಗಳಿಗೆ ಉತ್ತರಿಸಬೇಕು. ಈ ಕುರಿತು ಸಿಪಿಐ(ಎಂ) ನಾಯಕ ಎಂ.ಎ.ಬೇಬಿ ಅವರೇ ಹೆಚ್ಚಿನ ವಿವರ ನೀಡಬೇಕು’ ಎಂದು ಮಾಧ್ಯಮಗಳ ಮುಂದೆ ಒತ್ತಾಯಿಸಿದ್ದಾರೆ.

ADVERTISEMENT

ವಿವಾದ ಏಕೆ?

‘ಪಿ.ಎಂ.ಶ್ರೀ ಶಾಲಾ ಯೋಜನೆ’ ಮೂಲಕ ರಾಜ್ಯದಲ್ಲಿ ಸಂಘ ಪರಿವಾರದ ಕಾರ್ಯಸೂಚಿಯನ್ನು ಜಾರಿಗೊಳಿಸುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿ ಸಿಪಿಐ ಈ ಹಿಂದೆ ಸೇರ್ಪಡೆಯಾಗದಂತೆ ತಡೆ ಹಿಡಿದಿತ್ತು. ಆದರೆ, ಈ ಬಾರಿ ಸಚಿವ ಸಂಪುಟದಲ್ಲಿ ಚರ್ಚೆ ನಡೆಸದೇ, ಕೇಂದ್ರ ಸರ್ಕಾರದ ಯೋಜನೆಗೆ ಸೇರ್ಪಡೆಯಾಗಲು ರಾಜ್ಯ ಸರ್ಕಾರ ಒಪ್ಪಿಗೆ‌ ನೀಡಿದೆ. ಶಿಕ್ಷಣ ಇಲಾಖೆ ಕಾರ್ಯದರ್ಶಿ ಕೆ. ವಾಸುಕಿ ಅವರು ಗುರುವಾರ ರಾತ್ರಿ ನವದೆಹಲಿಯಲ್ಲಿ ಕೇಂದ್ರ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿ ಒಪ್ಪಂದಕ್ಕೆ ಸಹಿ ಹಾಕಿರುವುದೇ ವಿವಾದ ಸೃಷ್ಟಿಸಿದೆ.

ಸಿಪಿಐ ಈ ಹಿಂದೆ ಎರಡು ಸಲ ರಾಜ್ಯ ಸರ್ಕಾರದ ನಿರ್ಧಾರವನ್ನು ತಡೆಹಿಡಿದಿತ್ತು. ಮೈತ್ರಿ ಪಕ್ಷ ಸಿಪಿಐ ಅನ್ನು ಹಿರಿಯ ಪಾಲುದಾರ ಸಿಪಿಐ(ಎಂ) ಪಕ್ಕಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿತ್ತು. ಇದರಿಂದಾಗಿಯೇ, ಒಪ್ಪಂದಕ್ಕೆ ಸಹಿಹಾಕಲು ಒಂದು ತಿಂಗಳ ಕಾಲ ಹಿಂಜರಿದಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಸರ್ಕಾರವು, ಸಿಪಿಐ ಪ್ರಬಲ ವಿರೋಧದ ಹೊರತಾಗಿಯೂ ‘ಪ್ರಧಾನಮಂತ್ರಿ ಸ್ಕೂಲ್ಸ್‌ ಫಾರ್‌ ರೈಸಿಂಗ್‌’ (ಪಿಎಂ–ಶ್ರೀ) ಸಹಿಹಾಕಲು ಒಪ್ಪಿಗೆ ಸೂಚಿಸಿದ್ದರು.

ಈ ಯೋಜನೆಯು ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ)  ಚೌಕಟ್ಟಿನ ಭಾಗವಾಗಿದೆ. ಇದರ ಅನ್ವಯ, ಪ್ರತಿ ವಲಯದ ಎರಡು ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗಾಗಿ ಐದು ವರ್ಷದವರೆಗೂ ಪ್ರತಿ ವರ್ಷ ಪ್ರತಿಯೊಂದು ಶಾಲೆಗೆ ಅಂದಾಜು  ₹1 ಕೋಟಿ ಅನುದಾನ ದೊರಕುತ್ತದೆ. 

ಒಪ್ಪಂದಕ್ಕೆ ಸಹಿಹಾಕುವುದು ಕೇರಳದಲ್ಲಿ ಎನ್‌ಇಪಿ ಜಾರಿಗೆ ಹಾದಿ ಮಾಡಿಕೊಡುತ್ತದೆ ಎಂದು ಸಿಪಿಐ ಎಚ್ಚರಿಕೆ ನೀಡಿತ್ತು. ಅನುದಾನ ಪಡೆದ ಶಾಲೆಗಳ ಮುಂದೆ ‘ಪಿ.ಎಂ.ಶ್ರೀ ಶಾಲಾ ಯೋಜನೆ’ ಎಂದು ಫಲಕ ಹಾಕುವುದನ್ನು ಕಡ್ಡಾಯಗೊಳಿಸಿರುವುದು ಕೂಡ ಮೈತ್ರಿಪಕ್ಷದಲ್ಲಿ ಆಂತರಿಕ ಸಂಘರ್ಷಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ. 

ಪಿಎಂ–ಶ್ರೀ ಒಪ್ಪಂದದ ಕುರಿತಂತೆ ಯಾವುದೇ ಚರ್ಚೆಗಳಿಲ್ಲದೇ ಎಲ್ಲರನ್ನೂ ಕತ್ತಲಲ್ಲಿಡುವ ಮೂಲಕ ಎಲ್‌ಡಿಎಫ್‌ ಮುಂದುವರಿಯಲು ಹೇಗೆ ಸಾಧ್ಯ?
ಬಿನೋಯ್‌ ವಿಶ್ವಂ, ಸಿಪಿಐ ರಾಜ್ಯ ಕಾರ್ಯದರ್ಶಿ
ಕೇಂದ್ರ ಸರ್ಕಾರವು ತಡೆಹಿಡಿದಿರುವ ₹1500 ಕೋಟಿ ಅನುದಾನವನ್ನು ಪಡೆಯಲು ಪಿಎಂ–ಶ್ರೀ ಯೋಜನೆಗೆ ರಾಜ್ಯ ಸರ್ಕಾರ ಸೇರ್ಪಡೆಯಾಗಲಿದೆ
ವಿ. ಶಿವನ್‌ಕುಟ್ಟಿ ಶಿಕ್ಷಣ ಸಚಿವ ಸಿಪಿಎಂ ನಾಯಕ

ಮಿತ್ರಕೂಟದಲ್ಲಿ ಅಪಸ್ವರ; ಕಾಂಗ್ರೆಸ್‌ ಟೀಕೆ

ಮಿತ್ರ ಪಕ್ಷದಲ್ಲಿ ಚರ್ಚಿಸದೇ ಯೋಜನೆಗೆ ಸೇರ್ಪಡೆಯಾಗಿರುವ ಸಿಪಿಎಂ ನಿರ್ಧಾರಕ್ಕೆ ರಾಷ್ಟ್ರೀಯ ಜನತಾದಳ ಕೂಡ ಆಕ್ಷೇಪ ವ್ಯಕ್ತಪಡಿಸಿದೆ. ‘ಎಲ್‌ಡಿಎಫ್‌ನಲ್ಲಿ ಅಳವಾದ ಬಿರುಕುಗಳಿರುವುದು ಬಹಿರಂಗಗೊಂಡಿದೆ’ ಎಂದು ಕಾಂಗ್ರೆಸ್‌ ನಾಯಕ ಹಾಗೂ ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್‌ ಆರೋಪಿಸಿದ್ದಾರೆ. ‘ಅವಮಾನವನ್ನು ಸಹಿಸಿಕೊಳ್ಳಬೇಕೆ ಅಥವಾ ಬೇಡವೇ ಎಂಬುದನ್ನು ಸಿಪಿಐ ನಿರ್ಧರಿಸಬೇಕು. ಇದು ಸಿಪಿಐನ ರಾಜಕೀಯ ನಿರ್ಧಾರವಾಗಿದೆ ಸಿಪಿಐ(ಎಂ) ಕೇಂದ್ರ ಸಮಿತಿಯನ್ನು ಕೇರಳದ ರಾಜ್ಯ ಸಮಿತಿಯೇ ನಿಯಂತ್ರಿಸುತ್ತಿದೆ’ ಎಂದು ಹೇಳಿದ್ದಾರೆ. ‘ಪಿಎಂ–ಶ್ರೀ’ ಗುಪ್ತವಾದ ಅಜೆಂಡಾ ಹಾಗೂ ವಿವಾದಾಸ್ಪದ ನಿಯಾಮವಳಿಗಳ ಕುರಿತು ಕಾಂಗ್ರೆಸ್‌ ನೇತೃತ್ವದ ಸರ್ಕಾರವು ಬಹಿರಂಗವಾಗಿ ವಿರೋಧಿಸುತ್ತಿದೆ. ಆದರೆ ಕೇರಳವು ಸೂಕ್ತ ನೋಟಿಸ್‌ ನೀಡದೇ ಏಕಪಕ್ಷೀಯವಾಗಿ ಒಪ್ಪಿಗೆ ಸೂಚಿಸಿದೆ’ ಎಂದು ಸತೀಶನ್‌ ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.