ADVERTISEMENT

ಬಾಗಿಲು ತೆರೆದ ಶಬರಿಮಲೆ ಅಯ್ಯಪ್ಪ ದೇಗುಲ: ಭಕ್ತಾದಿಗಳಿಗೆ ಇಲ್ಲ ಪ್ರವೇಶ

ಪಿಟಿಐ
Published 17 ಆಗಸ್ಟ್ 2020, 1:59 IST
Last Updated 17 ಆಗಸ್ಟ್ 2020, 1:59 IST
ಶಬರಿಮಲೆಯ ಅಯ್ಯಪ್ಪ ದೇಗುಲ–ಸಾಂದರ್ಭಿಕ ಚಿತ್ರ
ಶಬರಿಮಲೆಯ ಅಯ್ಯಪ್ಪ ದೇಗುಲ–ಸಾಂದರ್ಭಿಕ ಚಿತ್ರ   

ಶಬರಿಮಲೆ (ಕೇರಳ): ಪ್ರಸಿದ್ಧ ಅಯ್ಯಪ್ಪ ದೇಗುಲದ ಬಾಗಿಲು ಭಾನುವಾರದಿಂದ ತೆರೆಯಲಾಗಿದೆ. ತಿಂಗಳಲ್ಲಿ ಐದು ದಿನಗಳ ಪೂಜೆ ನೆರವೇರಿಸಲು ದೇಗುಲ ತೆರೆದಿದೆ.

ಮಲಯಾಳಿ ಪಂಚಾಂಗದ ಮೊದಲ ತಿಂಗಳು (ಆಗಸ್ಟ್) ಚಿಂಗಮ್‌ನಲ್ಲಿ ಅಯ್ಯಪ್ಪ ಸ್ವಾಮಿಗೆ ಐದು ದಿನಗಳ ಪೂಜೆ ನೆರವೇರಿಸಲಾಗುತ್ತದೆ. ಆದರೆ, ಕೋವಿಡ್‌–19 ಕಾರಣದಿಂದಾಗಿ ಭಕ್ತಾದಿಗಳ ಪ್ರವೇಶ ನಿಷೇಧ ಮುಂದುವರಿದಿದೆ.

ಆಗಸ್ಟ್‌ 21ರ ವರೆಗೂ ದೇಗುವ ತೆರೆದಿರಲಿದೆ ಹಾಗೂ ಸಾಮಾನ್ಯ ಪೂಜಾ ಕೈಂಕರ್ಯಗಳು ನಡೆಯಲಿವೆ. ಕೋವಿಡ್‌ನಿಂದಾಗಿ ಭಕ್ತಾದಿಗಳಿಗೆ ದೇಗುಲ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿಲ್ಲ ಎಂದು ಶಬರಿಮಲೆ ದೇವಾಲಯದ ನಿರ್ವಹಣೆ ನಡೆಸುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಹೇಳಿದೆ.

ADVERTISEMENT

ಓಣಂ ಪೂಜೆಗಳಿಗಾಗಿ ಮತ್ತೆ ಆಗಸ್ಟ್‌ 29ರಿಂದ ಸೆಪ್ಟೆಂಬರ್‌ 2ರ ವರೆಗೂ ದೇಗುಲ ತೆರೆಯಲಿದೆ ಎಂದು ಟಿಡಿಬಿ ಪ್ರಕಟಣೆಯಲ್ಲಿ ತಿಳಿಸಿದೆ. ನವೆಂಬರ್‌ 16ರಿಂದ ಭಕ್ತಾದಿಗಳಿಗೆ ದರ್ಶನಕ್ಕೆ ಎರಡು ತಿಂಗಳು ದೇಗುಲ ತೆರೆಯಲಿದ್ದು, ಶಬರಿಮಲೆಗೆ ಬರುವವರು ಕೋವಿಡ್‌–19 ನೆಗೆಟಿವ್ ಸರ್ಟಿಫಿಕೆಟ್‌ ತರುವುದನ್ನು ಕಡ್ಡಾಯ ಮಾಡಿರುವುದಾಗಿ ಈ ಹಿಂದೆಯೇ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.