ADVERTISEMENT

ರಾಹುಲ್ ಗಾಂಧಿ ವಿರುದ್ಧದ ವಿವಾದಿತ ಹೇಳಿಕೆ ಹಿಂಪಡೆದ ಜಾಯ್ಸ್ ಜಾರ್ಜ್: ಏನದು?

ಪಿಟಿಐ
Published 30 ಮಾರ್ಚ್ 2021, 13:04 IST
Last Updated 30 ಮಾರ್ಚ್ 2021, 13:04 IST
ರಾಹುಲ್ ಗಾಂಧಿ (ಸಂಗ್ರಹ ಚಿತ್ರ)
ರಾಹುಲ್ ಗಾಂಧಿ (ಸಂಗ್ರಹ ಚಿತ್ರ)   

ಇಡುಕ್ಕಿ: ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ನೀಡಿರುವ ಹೇಳಿಕೆಯನ್ನು ಹಿಂಪಡೆಯುತ್ತಿರುವುದಾಗಿ ಎಡಪಕ್ಷ ಬೆಂಬಲಿತ ಮಾಜಿ ಸಂಸದ ಜಾಯ್ಸ್ ಜಾರ್ಜ್ ಹೇಳಿದ್ದಾರೆ.

'ಇರಟ್ಟಯಾರ್‌ಲ್ಲಿ ಚುನಾವಣಾ ರ್‍ಯಾಲಿ ವೇಳೆ ನೀಡಿದ್ದ ಅಸಮಂಜಸ ಹೇಳಿಕೆಯನ್ನು ಬೇಷರತ್ತಾಗಿ ಪಡೆಯುತ್ತಿದ್ದೇನೆ. ಆ ಹೇಳಿಕೆಗಾಗಿ ವಿಷಾದ ವ್ಯಕ್ತಪಡಿಸುತ್ತೇನೆ' ಎಂದು ಜಾರ್ಜ್ ಹೇಳಿದ್ದಾರೆ.

ಇಡುಕ್ಕಿ ಲೋಕಸಭಾ ಕ್ಷೇತ್ರದಲ್ಲಿ 2014ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸಿಪಿಐ ಬೆಂಬಲದೊಂದಿಗೆ ಜಾರ್ಜ್ ಅವರು ಜಯಗಳಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಡೀನ್ ಕುರಿಯಾಕೋಸ್ ವಿರುದ್ಧ ಪರಾಭವಗೊಂಡಿದ್ದರು.

ADVERTISEMENT

ಜಾರ್ಜ್ ಹೇಳಿದ್ದೇನು?

ಸೋಮವಾರ ಇರಟ್ಟಯಾರ್‌ನಲ್ಲಿ ವಿಧಾನಸಭಾ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ್ದ ಜಾರ್ಜ್, ‘ರಾಹುಲ್ ಗಾಂಧಿ ಅವಿವಾಹಿತ. ಅವರು ಮಹಿಳಾ ಕಾಲೇಜುಗಳಿಗೆ ಮಾತ್ರ ಭೇಟಿ ನೀಡುತ್ತಾರೆ. ಅವರೊಂದಿಗೆ ವ್ಯವಹರಿಸುವಾಗ ವಿದ್ಯಾರ್ಥಿನಿಯರು ಜಾಗೃತರಾಗಿರಬೇಕು. ಹೆಣ್ಣುಮಕ್ಕಳು ಅವರ ಮುಂದೆ ಎಂದಿಗೂ ಬಾಗಬಾರದು’ ಎಂದು ಹೇಳಿದ್ದರು.

ಈ ಹೇಳಿಕೆಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು. ಜಾರ್ಜ್ ಅವರನ್ನು ಬಂಧಿಸಬೇಕು ಎಂದು ಕಾಂಗ್ರೆಸ್ ಮುಖಂಡ ಕುರಿಯಾಕೋಸ್ ಆಗ್ರಹಿಸಿದ್ದರು. ಸಿಪಿಐ ಕೂಡ ಜಾರ್ಜ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿತ್ತು. ರಾಹುಲ್ ಗಾಂಧಿ ವಿರುದ್ಧ ವೈಯಕ್ತಿಕವಾಗಿ ದಾಳಿ ಮಾಡುವುದು ಎಲ್‌ಡಿಎಫ್ ನಿಲುವಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದರು.

ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಹೇಳಿಕೆ ವಾಪಸ್ ಪಡೆಯುವುದಾಗಿ ಜಾರ್ಜ್ ಹೇಳಿದ್ದು, ಹೇಳಿಕೆಗಾಗಿ ವಿಷಾದವನ್ನೂ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.