
ಸಾಮಾಜಿಕ ಮಾಧ್ಯಮ
ತಿರುವನಂತಪುರಂ: ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದ ಎಂಬ ಆರೋಪಕ್ಕೆ ಮನನೊಂದು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ.
ಮೃತನನ್ನು ಕೋಝಿಕ್ಕೋಡ್‌ನ ದೀಪಕ್ (42) ಎಂದು ಗುರುತಿಸಲಾಗಿದೆ.
ಬಸ್ಸಿನಲ್ಲಿ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ ಎಂಬ ಆರೋಪದಡಿ ದೀಪಕ್ ವಿರುದ್ಧ ಮಹಿಳೆಯು ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ ಪ್ರಾರಂಭಿಸಿದ್ದಳು.
ಸಾಮಾಜಿಕ ಮಾಧ್ಯಮ ಅಭಿಯಾನದಿಂದಾಗಿ ದೀಪಕ್ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಅವಮಾನ ಸಹಿಸಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ. ಮಹಿಳೆಯ ವಿರುದ್ಧ ಕ್ರಮಕ್ಕೂ ಆಗ್ರಹಿಸಿದ್ದಾರೆ.
ಕೆಲಸದ ನಿಮಿತ್ತ ದೀಪಕ್ ಕೋಝಿಕ್ಕೋಡ್‌ನಿಂದ ಕಣ್ಣೂರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಯೂಟ್ಯೂಬರ್ ಆಗಿರುವ ಮಹಿಳೆ, ನನಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹಂಚಿಕೊಂಡಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.
ಈ ಘಟನೆಯಿಂದ ದೀಪಕ್ ಸ್ನೇಹಿತರು ಹಾಗೂ ಕುಟುಂಬದವರು ಅಸಮಾಧಾನಗೊಂಡಿದ್ದಾರೆ. ದೀಪಕ್ ಮಹಿಳೆಯರೊಂದಿಗೆ ಎಂದಿಗೂ ಕೆಟ್ಟದಾಗಿ ನಡೆದುಕೊಳ್ಳುತ್ತಿರಲಿಲ್ಲ ಎಂದು ಸ್ನೇಹಿತರು ತಿಳಿಸಿದ್ದಾರೆ.
ಮಹಿಳೆ ಈ ಬಗ್ಗೆ ಎಲ್ಲೂ ದೂರು ದಾಖಲಿಸಿಲ್ಲ ಎಂದು ತಿಳಿದು ಬಂದಿದೆ.