ADVERTISEMENT

ವಯನಾಡ್: ಭೂಕುಸಿತ ಸಂತ್ರಸ್ತರಿಗೆ 2 ಉಪನಗರ ನಿರ್ಮಾಣಕ್ಕೆ ಕೇರಳ ಸರ್ಕಾರ ಚಿಂತನೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2025, 14:36 IST
Last Updated 1 ಜನವರಿ 2025, 14:36 IST
ಪ್ರವಾಹ, ಭೂಕುಸಿತದ ಅವಗಢಕ್ಕೆ ತುತ್ತಾದ ವಯನಾಡ್‌ ಜಿಲ್ಲೆಯ ಚೂರನ್‌ಮಲ ನೋಟ –ಪಿಟಿಐ ಸಂಗ್ರಹ ಚಿತ್ರ
ಪ್ರವಾಹ, ಭೂಕುಸಿತದ ಅವಗಢಕ್ಕೆ ತುತ್ತಾದ ವಯನಾಡ್‌ ಜಿಲ್ಲೆಯ ಚೂರನ್‌ಮಲ ನೋಟ –ಪಿಟಿಐ ಸಂಗ್ರಹ ಚಿತ್ರ   

ತಿರುವನಂತಪುರ: ವಯನಾಡ್ ಜಿಲ್ಲೆಯ ಮುಂಡಕ್ಕೈ, ಚೂರಲ್‌ಮಲದಲ್ಲಿ ಸಂಭವಿಸಿದ್ದ ಭೂಕುಸಿತದ ಸಂತ್ರಸ್ತರಿಗೆ ಕರ್ನಾಟಕ ಸರ್ಕಾರ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳ ನೆರವಿನಲ್ಲಿ ಎರಡು ಉಪ ನಗರಗಳನ್ನು ಅಭಿವೃದ್ಧಿಪಡಿಸಲು ಕೇರಳ ಸರ್ಕಾರ ಚಿಂತನೆ ನಡೆಸಿದೆ.

ಸಂತ್ರಸ್ತರಿಗೆ 100ಕ್ಕೂ ಅಧಿಕ ವಸತಿ ನಿರ್ಮಿಸುವ ಭರವಸೆ ನೀಡಿರುವ 38 ಪ್ರಾಯೋಜಕರ ಪ್ರತಿನಿಧಿಗಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬುಧವಾರ ಈ ಕುರಿತು ಸಭೆ ನಡೆಸಿದರು.

100 ಮನೆ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿರುವ ಕರ್ನಾಟಕ ಸರ್ಕಾರ ಮತ್ತು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರ ಪ್ರತಿನಿಧಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. 

ADVERTISEMENT

ವಸತಿ ನಿರ್ಮಾಣದಲ್ಲಿ ಪಾರದರ್ಶಕತೆಗೆ ಒತ್ತು ನೀಡಲು ಮತ್ತು ಪ್ರಾಯೋಜಕರೂ ನಿರ್ಮಾಣ ಕಾರ್ಯ ಪರಿಶೀಲಿಸಲು ಆಗುವಂತೆ ಆನ್‌ಲೈನ್‌ ಟ್ರ್ಯಾಕಿಂಗ್ ವ್ಯವಸ್ಥೆ ರೂಪಿಸಲು ಸರ್ಕಾರ ತೀರ್ಮಾನಿಸಿದೆ.

ಕಲ್ಪೆಟ್ಟಾದ ಎಲ್‌ಸ್ಟೋನ್‌ ಎಸ್ಟೇಟ್‌ನ 58.50 ಹೆಕ್ಟೇರ್, ನೆಡುಂಬಲ ಎಸ್ಟೇಟ್‌ನ 48.96 ಹೆಕ್ಟೇರ್‌ನಲ್ಲಿ ಉಪನಗರಗಳು ಸ್ಥಾಪನೆ ಆಗಲಿವೆ. ಎಲ್‌ಸ್ಟೋನ್‌ನಲ್ಲಿ ತಲಾ 5 ಸೆಂಟ್ಸ್ ಭೂಮಿ ಹಾಗೂ ನೆಡುಂಬಲದಲ್ಲಿ 10 ಸೆಂಟ್ಸ್‌ ಭೂಮಿಯಲ್ಲಿ ಮನೆ ನಿರ್ಮಾಣ ಆಗಲಿದೆ. ಫಲಾನುಭವಿಗಳ ಪಟ್ಟಿಯನ್ನು ಜನವರಿ 25ರ ವೇಳೆಗೆ ಅಂತಿಮಗೊಳಿಸಲಾಗುವುದು ಎಂದೂ ಸರ್ಕಾರ ತಿಳಿಸಿದೆ. 

ಕುಟುಂಬಕ್ಕೆ 1000 ಚದರ ಅಡಿ ಅಳತೆಯ ಮನೆ ಒದಗಿಸಲಿದ್ದು, ಉಪನಗರಗಳು ಎಲ್ಲ ಮೂಲಸೌಲಭ್ಯ ಹೊಂದಿರಲಿವೆ. ಕುಟುಂಬಗಳ ಆದ್ಯತೆ ಆಧರಿಸಿ ಜೀವನಾಧಾರ ಮಾರ್ಗವನ್ನೂ ಕಲ್ಪಿಸಲಾಗುವುದು. ಬಾಧಿತ ಕುಟುಂಬಗಳ ಸಮೀಕ್ಷೆ ನಡೆಸಿ, ಸಮಗ್ರ ಯೋಜನೆ ರೂಪಿಸಲಾಗಿದೆ ಎಂದಿದೆ. 

‘ವಯನಾಡು ಭೂಕುಸಿತ ಅವಗಢವನ್ನು ಗಂಭೀರ ಪ್ರಕೃತಿ ವಿಕೋಪ ಎಂದು ಘೋಷಿಸಲು ಕೇಂದ್ರ ವಿಳಂಬ ಮಾಡುತ್ತಿರುವುದು ಮನೆ ನಿರ್ಮಾಣ ವಿಳಂಬವಾಗಲು ಕಾರಣವಾಗಿದೆ. ಅವಘಡದ ಎರಡು ತಿಂಗಳಲ್ಲಿ ಈ ಘೋಷಣೆ ಆಗಿದ್ದರೆ ವಿಶ್ವಸಂಸ್ಥೆ ಸೇರಿ ಇನ್ನು ಹಲವು ಸಂಸ್ಥೆಗಳಿಂದ ನೆರವು ಸಿಗುತ್ತಿತ್ತು. ಬಾಧಿತ ಕುಟುಂಬಗಳ ಸಾಲಮನ್ನಾ ಮಾಡಲೂ ಕೇಂದ್ರ ಸಿದ್ಧವಿಲ್ಲ’ ಎಂದು ಮುಖ್ಯಮಂತ್ರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.