ರಿನಿ ಆನ್ ಜಾರ್ಜ್
(ಚಿತ್ರ ಕೃಪೆ: ಇನ್‌ಸ್ಟಾಗ್ರಾಂ/@rinianngeorge)
ಕೊಚ್ಚಿ: 'ಕೇರಳದ ಪ್ರಸಿದ್ಧ ರಾಜಕೀಯ ಪಕ್ಷವೊಂದರ ಯುವ ನಾಯಕ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದು, ದುರ್ವರ್ತನೆ ತೋರಿದ್ದಾರೆ' ಎಂದು ಮಲಯಾಳಂ ನಟಿ ರಿನಿ ಆನ್ ಜಾರ್ಜ್ ಆರೋಪಿಸಿದ್ದಾರೆ.
'ನನ್ನ ಹೇಳಿಕೆಯ ಬೆನ್ನಲ್ಲೇ ವ್ಯಾಪಕವಾಗಿ ಸೈಬರ್ ದಾಳಿ ನಡೆಯುತ್ತಿದ್ದು, ಬೆದರಿಕೆ ಮುಂದುವರಿದ್ದಲ್ಲಿ ನಾಯಕನ ಹೆಸರನ್ನು ಬಹಿರಂಪಪಡಿಸುತ್ತೇನೆ' ಎಂದು ಎಚ್ಚರಿಕೆ ನೀಡಿದ್ದಾರೆ.
ಬುಧವಾರ ವರದಿಗಾರರೊಂದಿಗೆ ಮಾತನಾಡಿದ್ದ ರಿನಿ, 'ಯುವ ನೇತಾರ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿದ್ದಷ್ಟೇ ಅಲ್ಲದೆ ಹೋಟೆಲ್‌ಗೆ ಆಹ್ವಾನಿಸಿದ್ದನು' ಎಂದು ದೂರಿದ್ದಾರೆ.
ಇತ್ತೀಚೆಗೆ ನೀಡಿದ ಆನ್‌ಲೈನ್ ಸಂದರ್ಶನದಲ್ಲಿ ಈ ಕುರಿತು ರಿನಿ ಮೊದಲ ಬಾರಿ ಆರೋಪ ಮಾಡಿದ್ದರು. 'ಯುವ ನಾಯಕನಿಗೆ ಎಚ್ಚರಿಕೆ ನೀಡಿದ್ದರೂ, ಪಕ್ಷದ ಹಿರಿಯ ನಾಯಕರಿಗೆ ದೂರು ನೀಡಿದ್ದರೂ ಅನುಚಿತ ವರ್ತನೆ ಮುಂದುವರಿದಿತ್ತು' ಎಂದು ಅವರು ಹೇಳಿದ್ದಾರೆ.
ನಾಯಕನ ಹೆಸರು ಬಹಿರಂಗಪಡಿಸಲು ರಿನಿ ನಿರಾಕರಿಸಿದ್ದು, ಕಾನೂನು ಕ್ರಮ ಕೈಗೊಳ್ಳಬೇಕೇ ಬೇಡವೇ ಎಂಬುದನ್ನು ನಿರ್ಧರಿಸಿಲ್ಲ ಎಂದಿದ್ದಾರೆ.
'ಮಾಧ್ಯಮಗಳ ಗಮನ ಸೆಳೆಯುವ ಉದ್ದೇಶ ನನ್ನದ್ದಾಗಿಲ್ಲ. ಆದರೆ 'ಕ್ರಿಮಿನಲ್' ನಾಯಕನ ದುರುದ್ದೇಶ ಬಯಲು ಮಾಡುವ ಇರಾದೆಯಿತ್ತು. ಬುಧವಾರ ರಾತ್ರಿಯಿಂದಲೇ ನನ್ನ ಮೇಲೆ ಆನ್‌ಲೈನ್ ದಾಳಿ ನಡೆಯುತ್ತಿದೆ' ಎಂದು ದೂರಿದ್ದಾರೆ.
'ಈ ನಾಯಕನಿಂದ ದುರ್ವರ್ತನೆಗೆ ಒಳಗಾದ ಮಹಿಳೆಯರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ನನ್ನನ್ನು ಸಂಪರ್ಕಿಸಿದ್ದಾರೆ' ಎಂದೂ ತಿಳಿಸಿದ್ದಾರೆ.
'ನಾಯಕನಿಂದ ಶೋಷಣೆಗೆ ಒಳಗಾದ ಮಹಿಳೆಯರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಮುಂದೆ ಬರಬೇಕು. ಯಾವುದೇ ಪರಿಣಾಮಗಳನ್ನು ಎದುರಿಸಲು ನಾನು ಸಿದ್ಧನಿದ್ದೇನೆ' ಎಂದು ಹೇಳಿದ್ದಾರೆ.
ಏತನ್ಮಧ್ಯೆ ನಟಿಯ ಹೇಳಿಕೆ ಬೆನ್ನಲ್ಲೇ ಪಾಲಕ್ಕಾಡ್‌ನಲ್ಲಿರುವ ಕಾಂಗ್ರೆಸ್ ಶಾಸಕರ ಕಚೇರಿಗೆ ಬಿಜೆಪಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಈ ವೇಳೆ ಪೊಲೀಸರು ತಡೆ ಹಿಡಿದಿದ್ದಾರೆ. ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಶಾಸಕನ ರಾಜೀನಾಮೆಗೆ ಬಿಜೆಪಿ ಆಗ್ರಹಿಸಿದ್ದು, ಪ್ರಕರಣ ದಾಖಲಿಸಲು ಒತ್ತಾಯಿಸಿದೆ.
ಶಾಸಕನ ವಿರುದ್ಧದ ಆರೋಪದ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ ಎಂದು ಪಾಲಕ್ಕಾಡ್ ಡಿಸಿಸಿ ಕಚೇರಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.