ADVERTISEMENT

ಇ.ಡಿ.ವಿಚಾರಣೆಗೆ ಹಾಜರಾದ ಕೆಜಿಎಫ್‌ ಬಾಬು

​ಪ್ರಜಾವಾಣಿ ವಾರ್ತೆ
Published 19 ಜನವರಿ 2023, 22:51 IST
Last Updated 19 ಜನವರಿ 2023, 22:51 IST

ನವದೆಹಲಿ: ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಯೂಸುಫ್‌ ಶರೀಫ್‌ (ಕೆಜಿಎಫ್‌ ಬಾಬು) ಜಾರಿ ನಿರ್ದೇಶನಾಲಯದ ವಿಚಾರಣೆಗೆ ಗುರುವಾರ ಹಾಜರಾದರು.

ಹಣ ಅಕ್ರಮ ವರ್ಗಾವಣೆ ಕಾಯ್ದೆಯಡಿ ತನಿಖೆ ನಡೆಸುತ್ತಿರುವ ನಿರ್ದೇಶನಾಲಯವು ವಿಚಾರಣೆಗೆ ಹಾಜರಾಗುವಂತೆ ಕೆಜಿಎಫ್‌ ಬಾಬುಗೆ ಸಮನ್ಸ್‌ ನೀಡಿತ್ತು. ರಿಯಲ್ ಎಸ್ಟೇಟ್‌ ಉದ್ಯಮಿಯಾದ ಶರೀಫ್, 2021ರ ಡಿಸೆಂಬರ್‌ನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬೆಂಗಳೂರು ನಗರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ₹1,744 ಕೋಟಿ ಆಸ್ತಿ ಹೊಂದಿದ್ದೇನೆ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ತಿಳಿಸಿದ್ದರು.

ವಿಚಾರಣೆಗೆ ಹಾಜರಾದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಕೆಜಿಎಫ್‌ ಬಾಬು, ‘ನನ್ನ ವಿರೋಧಿಗಳು ಪದೇ ಪದೇ ತೊಂದರೆ ಕೊಡುತ್ತಿದ್ದಾರೆ. ಹೀಗಾಗಿ, ಜಾರಿ ನಿರ್ದೇಶನಾಲ ಯದವರು ವಿಚಾರಣೆಗೆ ಕರೆಯುತ್ತಿದ್ದಾರೆ. ವಿರೋಧಿಗಳು ಯಾರು ಎಂಬುದು ನಿಮಗೇ ಗೊತ್ತಿದೆ’ ಎಂದರು.

ADVERTISEMENT

‘ಆಸ್ತಿಯ ಎಲ್ಲ ವಿವರಗಳನ್ನು ಅಧಿಕಾರಿಗಳಿಗೆ ಕೊಟ್ಟಿದ್ದೇನೆ. ಇ.ಡಿಯವರ ಬಳಿ ಇರುವ 4 ಕೆ.ಜಿ.ಚಿನ್ನ ಹಾಗೂ ವಜ್ರ ಬಿಡಿಸಿಕೊಳ್ಳಲು ಅರ್ಜಿ ಹಾಕಿದ್ದೇನೆ. ಅದರೂ ನನ್ನ ಕರೆಯುತ್ತಿದ್ದಾರೆ. ಚಿಕ್ಕಪೇಟೆ ಜನರಿಗೆ ₹350 ಕೋಟಿ ಕೊಡ್ತೇನೆ ಹಾಗೂ ಮನೆ ಕಟ್ಟಿಸಿಕೊಡುತ್ತೇನೆ ಎಂದು ಹೇಳಿದ ದಿನದಿಂದ ಹೀಗೆ ತೊಂದರೆ ಎದುರಾಗುತ್ತಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.