ADVERTISEMENT

Tirupati Stampede | ಕಾಲ್ತುಳಿತದಲ್ಲಿ ಪತ್ನಿ ಸಾವು: ಪತಿಯ ಆಕ್ರಂದನ

ಕೋವಿಡ್‌–19ರ ವೇಳೆ ಮಕ್ಕಳ ಮರಣ

​ಪ್ರಜಾವಾಣಿ ವಾರ್ತೆ
Published 9 ಜನವರಿ 2025, 16:36 IST
Last Updated 9 ಜನವರಿ 2025, 16:36 IST
.
.   

ಚೆನ್ನೈ: ಕಾಲ್ತುಳಿತದಲ್ಲಿ ಪತ್ನಿ ಮಲ್ಲಿಕಾ (50) ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ತಮಿಳುನಾಡಿನ ಸೇಲಂನ ಕೃಷ್ಣನ್‌ (70) ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಇಬ್ಬರು ಮಕ್ಕಳನ್ನು ಕೋವಿಡ್‌ ಸಂದರ್ಭದಲ್ಲಿ ಕಳೆದುಕೊಂಡಿದ್ದ ಕೃಷ್ಣನ್‌ ಅವರಿಗೆ, ಪತ್ನಿಯ ಸಾವು ತೀವ್ರ ಆಘಾತ ತರಿಸಿದೆ.

‘ಇನ್ನು ಮುಂದೆ ನನ್ನವರು ಎಂದು ಕರೆಯಲು ಯಾರೂ ಇಲ್ಲ. ಕೋವಿಡ್‌ ವೇಳೆ ಇಬ್ಬರು ಮಕ್ಕಳನ್ನು ಕಳೆದುಕೊಂಡೆ, ಈಗ ಪತ್ನಿಯೂ ಇಲ್ಲ. ಹೇಗೆ ಸಮಾಧಾನ ಮಾಡಿಕೊಳ್ಳಲಿ’ ಎಂದು ಕಣ್ಣೀರಾಕಿದರು.

ಸೇಲಂನ ಮೇಚೇರಿಯ ದಂಪತಿ ಗ್ರಾಮದ ಕೆಲವರೊಂದಿಗೆ ರೈಲಿನಲ್ಲಿ ಬುಧವಾರ ತಿರುಪತಿಗೆ ಬಂದಿದ್ದರು.

ADVERTISEMENT

‘ವೈಕುಂಠ ದ್ವಾರ ದರ್ಶನಕ್ಕಾಗಿ ಟಿಕೆಟ್‌ ಪಡೆಯುವ ಸಂದರ್ಭದಲ್ಲಿ ನೂಕು ನುಗ್ಗಲಾಗಿ ಕಾಲ್ತುಳಿತ ಸಂಭವಿಸಿತು. ಅಲ್ಲಿ ಸಿಲುಕಿದ ಪತ್ನಿಯ ಸೊಂಟಕ್ಕೆ ಗಾಯವಾಯಿತು. ನಾನು ಅವರನ್ನು ಮೇಲಕ್ಕೆತ್ತಿ ಸುರಕ್ಷಿತ ಪ್ರದೇಶಕ್ಕೆ ತಲುಪಿಸಿದೆ. ಆದರೆ ಪತ್ನಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಇದೆಲ್ಲ ಸಂಜೆ 7ರಿಂದ 8 ಗಂಟೆಯ ನಡುವೆ ಸಂಭವಿಸಿತು’ ಎಂದು ಕೃಷ್ಣನ್‌ ತಿಳಿಸಿದರು.

ಮೃತದೇಹ ಪಡೆಯಲು ನಿರಾಕರಣೆ: ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಲ್ಲಿಕಾ ಅವರು ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕೃಷ್ಣನ್‌ ಅವರು ಪತ್ನಿಯ ಮೃತದೇಹವನ್ನು ಆಸ್ಪತ್ರೆಯಿಂದ ಪಡೆಯಲು ನಿರಾಕರಿಸಿದರು.

‘ನನ್ನ ಹೆಂಡತಿ ಆರೋಗ್ಯವಾಗಿದ್ದರು. ನೂಕುನುಗ್ಗಲು, ಕಾಲ್ತುಳಿತದ ವೇಳೆ ಅವರು ಅಸುನೀಗಿದ್ದಾರೆ. ಹೀಗಿರುವಾಗ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎಂದರೆ ಹೇಗೆ’ ಎಂದು ಕೃಷ್ಣನ್‌ ಪ್ರಶ್ನಿಸಿದರು.

ಮಲ್ಲಿಕಾ ಅವರ ನಿಧನಕ್ಕೆ ಕಂಬನಿ ಮಿಡಿದಿರುವ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ಮೃತರ ಕುಟುಂಬದವರಿಗೆ ₹ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.