ADVERTISEMENT

ನೇಪಾಳಿ ವಿದ್ಯಾರ್ಥಿನಿ ಆತ್ಮಹತ್ಯೆ: ತಂದೆಗೆ ಶವ ಹಸ್ತಾಂತರ

ಒಡಿಶಾ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಪ್ರಕರಣ; ಘಟನೆಗೆ ರಾಜ್ಯದಾದ್ಯಂತ ತೀವ್ರ ಆಕ್ರೋಶ

ಪಿಟಿಐ
Published 18 ಫೆಬ್ರುವರಿ 2025, 16:07 IST
Last Updated 18 ಫೆಬ್ರುವರಿ 2025, 16:07 IST
<div class="paragraphs"><p>ಪ್ರಕೃತಿ ಲಮ್ಸಾಲ್</p></div>

ಪ್ರಕೃತಿ ಲಮ್ಸಾಲ್

   

ಭುವನೇಶ್ವರ: ಕೆಐಐಟಿಯ ವಿದ್ಯಾರ್ಥಿನಿ, ನೇಪಾಳದ ಪ್ರಕೃತಿ ಲಮ್ಸಾಲ್ (20) ಆತ್ಮಹತ್ಯೆ ಪ್ರಕರಣ ಒಡಿಶಾ ವಿಧಾನಸಭೆಯಲ್ಲಿ ಪ್ರತಿಧ್ವನಿಸುವ ಜತೆಗೆ ರಾಜ್ಯದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇಲ್ಲಿನ ಏಮ್ಸ್‌ನಲ್ಲಿ ಮಂಗಳವಾರ ಮರಣೋತ್ತರ ಪರೀಕ್ಷೆಯ ನಂತರ ವಿದ್ಯಾರ್ಥಿನಿಯ ಶವವನ್ನು ಆಕೆಯ ತಂದೆ ಸುನೀಲ್‌ ಲಮ್ಸಾಲ್‌ಗೆ ಒಡಿಶಾ ಪೊಲೀಸರು ಹಸ್ತಾಂತರಿಸಿದರು. ಮಗಳ ಶವವನ್ನು ನೇಪಾಳಕ್ಕೆ ಕೊಂಡೊಯ್ಯುವುದಾಗಿ ಸುನೀಲ್‌ ತಿಳಿಸಿದ್ದಾರೆ.

ADVERTISEMENT

ಏತನ್ಮಧ್ಯೆ, ಒಡಿಶಾ ಸರ್ಕಾರವು ಈ ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ನೇತೃತ್ವದಲ್ಲಿ, ಉನ್ನತ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ಒಳಗೊಂಡ ಮೂವರು ಸದಸ್ಯರ ಉನ್ನತ ಮಟ್ಟದ ಸತ್ಯಶೋಧನಾ ತಂಡವನ್ನು ರಚಿಸಿದೆ.

ನಗರದ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿಯಲ್ಲಿ (ಕೆಐಐಟಿ) ಮೂರನೇ ವರ್ಷದ ಬಿಟೆಕ್ (ಕಂಪ್ಯೂಟರ್ ಸೈನ್ಸ್) ವಿದ್ಯಾರ್ಥಿನಿಯಾಗಿದ್ದ ಪ್ರಕೃತಿ ಲಮ್ಸಾಲ್ (20) ಭಾನುವಾರ ಮಧ್ಯಾಹ್ನ ತನ್ನ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದ್ದು, ಕ್ಯಾಂಪಸ್‌ನಲ್ಲಿ ಅಶಾಂತ ಪರಿಸ್ಥಿತಿ ತಲೆದೋರಿದೆ.

‘ಘಟನೆ ಸಂಬಂಧ ಎರಡು ಪ್ರಕರಣ ದಾಖಲಾಗಿದ್ದು, ಇದರಲ್ಲಿ ಒಂದು ಪ್ರಕರಣ ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಸಂಬಂಧಿಸಿದ್ದಾಗಿದೆ. ಮತ್ತೊಂದು, ಘಟನೆಯ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ಖಾಸಗಿ ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿ ನಿಂದಿಸಿ, ಥಳಿಸುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವುದರ ಕುರಿತದ್ದಾಗಿದೆ’ ಎಂದು ಭುವನೇಶ್ವರ ಡಿಸಿಪಿ ಪಿನಾಕ್ ಮಿಶ್ರಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಈ ಘಟನೆ ಸಂಬಂಧ ಇಬ್ಬರು ಭದ್ರತಾ ಸಿಬ್ಬಂದಿಗಳಾದ ರಮಾಕಾಂತ ನಾಯಕ್ (45) ಮತ್ತು ಜೋಗೇಂದ್ರ ಬೆಹೆರಾ (25) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.