ADVERTISEMENT

ರೈತರ ಪಾದಯಾತ್ರೆ ಅಂತ್ಯ: ಹೋರಾಟ ನಿರಂತರ

ಭಾರತೀಯ ಕಿಸಾನ್‌ ಒಕ್ಕೂಟದ ಅಧ್ಯಕ್ಷ ರಾಕೇಶ್‌ ಟಿಕಾಯತ್‌ ಎಚ್ಚರಿಕೆ

ಪಿಟಿಐ
Published 4 ಅಕ್ಟೋಬರ್ 2018, 2:23 IST
Last Updated 4 ಅಕ್ಟೋಬರ್ 2018, 2:23 IST
   

ಘಾಜಿಯಾಬಾದ್‌: ‘ಕಿಸಾನ್‌ ಕ್ರಾಂತಿ ಪಾದಯಾತ್ರೆ ಮುಕ್ತಾಯವಾಗಿದ್ದು, ಬೇಡಿಕೆ ಈಡೇರುವವರೆಗೂ ಚಳವಳಿ ಮುಂದುವರಿಯಲಿದೆ’ ಎಂದು ಭಾರತೀಯ ಕಿಸಾನ್‌ ಒಕ್ಕೂಟದ ಅಧ್ಯಕ್ಷ ರಾಕೇಶ್‌ ಟಿಕಾಯತ್‌ ಎಚ್ಚರಿಕೆ ನೀಡಿದರು.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತರು ಕೈಗೊಂಡಿದ್ದ ಪಾದಯಾತ್ರೆ ರಾಜಧಾನಿಯ ಕಿಸಾನ್‌ ಘಾಟ್‌ನಲ್ಲಿ ಅಂತ್ಯಗೊಂಡ ಸಂದರ್ಭದಲ್ಲಿ ಅವರು ಮಾತನಾಡಿದರು.

‘ನಮ್ಮ ಬೇಡಿಕೆ ಈಡೇರದಿದ್ದರೆ 2019ರ ಚುನಾವಣೆಯಲ್ಲಿ ರೈತರು ಕೇಂದ್ರ ಸರ್ಕಾರಕ್ಕೆ ಪಾಠ ಕಲಿಸಲಿದ್ದಾರೆ. ರೈತರ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯುವುದು ನಮ್ಮ ಉದ್ದೇಶವಾಗಿತ್ತು. ಈ ಪ್ರಯತ್ನದಲ್ಲಿ ನಾವು ಯಶಸ್ಸು ಕಂಡಿದ್ದೇವೆ’ ಎಂದರು.

ADVERTISEMENT

‘ಪೊಲೀಸರು ರೈತರೊಂದಿಗೆ ಕ್ರೂರವಾಗಿ ನಡೆದುಕೊಂಡರು. ಗಾಂಧಿ ಜಯಂತಿ ದಿನವೇ ಮುಗ್ಧ ರೈತರು ಪೊಲೀಸರ ಲಾಠಿ ಏಟು ತಿನ್ನುವಂತಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು.

ರೈತ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಹದಿನೈದು ಬೇಡಿಕೆಗಳ ಪೈಕಿ ಏಳು ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಸಮ್ಮತಿಸಿದೆ.

ಉತ್ತರಾಖಂಡದ ಹರಿದ್ವಾರದ ಟಿಕಾಯತ್‌ ಘಾಟ್‌ನಿಂದ ಸೆ.23ರಂದು ಯಾತ್ರೆ ಆರಂಭವಾಗಿತ್ತು. ಮಂಗಳವಾರ ಮಧ್ಯರಾತ್ರಿ ದೆಹಲಿ ಪೊಲೀಸರು ಬ್ಯಾರಿಕೇಡ್‍ಗಳನ್ನು ತೆಗೆದು ಕೃಷಿಕರು ಕಿಸಾನ್‌ ಘಾಟ್‌ನತ್ತ ತೆರಳಲು ಅನುವು ಮಾಡಿಕೊಟ್ಟರು. ಚೌಧರಿ ಚರಣ್‌ ಸಿಂಗ್ ಅವರ ಸಮಾಧಿ ಸ್ಥಳ ಕಿಸಾನ್‌ ಘಾಟ್‌ಗೆ ತೆರಳಿದ ರೈತರು ಪ್ರತಿಭಟನೆ ಮುಕ್ತಾಯಗೊಳಿಸಿ ತಮ್ಮ ಊರುಗಳಿಗೆ ಹಿಂದಿರುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.