ADVERTISEMENT

ಕಿಶ್ತ್‌ವಾಡ: ಐವರು ಭಯೋತ್ಪಾದಕರ ಮನೆ ಮೇಲೆ ದಾಳಿ

ಪಿಟಿಐ
Published 17 ಮೇ 2023, 13:31 IST
Last Updated 17 ಮೇ 2023, 13:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಿಶ್ತ್‌ವಾಡ/ಜಮ್ಮು: ‘ಉಗ್ರವಾದಕ್ಕೆ ಸಹಕಾರ ಹಾಗೂ ಭಯೋತ್ಪಾದನೆಗೆ ಧನಸಹಾಯ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ವಿಶೇಷ ತನಿಖಾ ಘಟಕವು ಕಿಶ್ತ್‌ವಾಡದ ಐವರು ಭಯೋತ್ಪಾದಕರ ಮನೆ ಮೇಲೆ ಬುಧವಾರ ದಾಳಿ ನಡೆಸಿದೆ’ ಎಂದು ಕಿಶ್ತ್‌ವಾಡದ ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ ಖಲೀಲ್‌ ಪೊಶ್ವಾಲ್‌ ಹೇಳಿದರು.

‘ಕಾನೂನುಬಾಹಿರ ಚಟುವಟಿಕೆ ನಿಗ್ರಹ ಕಾಯ್ದೆಯಡಿ (ಯುಎಪಿಎ) ಶೋಧ ನಡೆಸಲು ಎನ್‌ಐಎ ನ್ಯಾಯಾಲಯದಿಂದ ವಾರೆಂಟ್‌ ಪಡೆದುಕೊಳ್ಳಲಾಗಿತ್ತು. ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಕೆಲಸ ಮಾಡುತ್ತಿದ್ದ ಈ ಐವರು, ಕಿಶ್ತ್‌ವಾಡ ಪ್ರದೇಶದಲ್ಲಿ ಭಯೋತ್ಪಾದಾ ಚಟುವಟಿಕೆಗಳು ಏರಿಕೆಯಾಗಲು ಕಾರಣರಾಗಿದ್ದರು’ ಎಂದರು.

‘ಐದು ವಿಶೇಷ ತನಿಖಾ ಘಟಕ ಹಾಗೂ ಪೊಲೀಸರ ತಂಡವು ದಾಳಿ ನಡೆಸಿದೆ. ದೇಶದ್ರೋಹ ಚಟುವಟಿಕೆಗಳನ್ನು ನಡೆಸಲು ಕಾರ್ಯ ನಿಗದಿ ಮಾಡುತ್ತಿದ್ದಕ್ಕೆ ಸಾಕ್ಷ್ಯಗಳು ದಾಳಿಯ ವೇಳೆ ದೊರೆತಿವೆ’ ಎಂದು ವಿವರಿಸಿದರು.

ADVERTISEMENT

‘ಕಿಶ್ತ್‌ವಾಡ ಪ್ರದೇಶದಲ್ಲಿ ವಾಸವಿದ್ದು, ಭಾರತ–ಪಾಕಿಸ್ತಾನ ಗಡಿಯುದ್ದಕ್ಕೂ ಉಗ್ರ ಚಟುವಟಿಕೆ ನಡೆಸುತ್ತಿದ್ದ 23 ಭಯೋತ್ಪಾದಕರ ವಿರುದ್ಧ ಜಮ್ಮುವಿನ ವಿಶೇಷ ಎನ್‌ಐಎ ನ್ಯಾಯಾಲಯವು ಏ.26ರಂದು ಜಾಮೀನುರಹಿತ ವಾರೆಂಟ್‌ ಜಾರಿ ಮಾಡಿತ್ತು. ಇದಕ್ಕೂ ಮೊದಲು 13 ಭಯೋತ್ಪಾದಕರ ಮೇಲೆ ಇಂಥದ್ದೆ ವಾರೆಂಟ್‌ ಜಾರಿ ಮಾಡಲಾಗಿತ್ತು’ ಎಂದು ಮಾಹಿತಿ ನೀಡಿದರು.

‘ಕಿಶ್ತ್‌ವಾಡದಿಂದ ಪಾಕಿಸ್ತಾನಕ್ಕೆ ಭಯೋತ್ಪಾದನಾ ಸಂಘಟನೆಗಳಿಗೆ ಸೇರಲು 36 ಮಂದಿ ಹೋಗಿದ್ದರು. ಈ ಎಲ್ಲರ ವಿರುದ್ಧ 2 ಎಫ್‌ಐಆರ್‌ಗಳನ್ನು ದಾಖಲು ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.