ರಾತ್ರಿ ಇಡೀ ಸುರಿದ ಭಾರಿ ಮಳೆಗೆ ಕೋಲ್ಕತ್ತದ ರಸ್ತೆಗಳಲ್ಲಿ ನೀರು ನಿಂತಿದೆ
ಎಎಫ್‌ಪಿ ಚಿತ್ರ
ಕೋಲ್ಕತ್ತ: ರಾತ್ರಿ ಇಡೀ ಸುರಿದ ಧಾರಾಕಾರ ಮಳೆಗೆ ಕೋಲ್ಕತ್ತ ನಗರವು ಮಂಗಳವಾರ ಸಂಪೂರ್ಣವಾಗಿ ಸ್ಥಬ್ದವಾಯಿತು. ವಿದ್ಯುತ್ ತಂತಿ ತಗುಲಿ ಸುಮಾರು ಏಳು ಮಂದಿ ಮೃತಪಟ್ಟಿದ್ದಾರೆ. ನಗರದ ಮುಕ್ಕಾಲು ಭಾಗವು ಮುಳುಗಿದೆ. ಸಂಚಾರ ಕೂಡ ಪೂರ್ಣ ಪ್ರಮಾಣದಲ್ಲಿ ನಿಂತು ಹೋಗಿತ್ತು.
ರಸ್ತೆಗಳಲ್ಲಿ ಸೊಂಟದವರೆಗೆ ನೀರು ನಿಂತಿದೆ. ಮಾರ್ಗ ಮಧ್ಯದಲ್ಲಿಯೇ ಮಧ್ಯ ರಸ್ತೆಗಳಲ್ಲಿಯೇ ಬಸ್‌ಗಳು, ಕಾರುಗಳು ಕೆಟ್ಟು ನಿಂತಿವೆ. ಬಸ್‌ನಲ್ಲಿದ್ದ ಜನರು ಪರದಾಡುವಂತಾಯಿತು. ರಸ್ತೆಗಳ ಮೇಲೆ ನಿಂತ ಮಳೆ ನೀರಿನಲ್ಲಿಯೇ ಜನರು ಓಡಾಡುತ್ತಿದ್ದ ದೃಶ್ಯಗಳು ಕಂಡುಬಂದವು. ಕ್ಯಾಬ್‌ಗಳು ಬುಕ್ ಆಗುತ್ತಲೇ ಇರಲಿಲ್ಲ. ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸಿದ ಕ್ಯಾಬ್ ಸೇವೆ ಒದಗಿಸುವವರು, ದುಬಾರಿ ದರ ವಸೂಲಿ ಮಾಡಿದರು.
30 ವಿಮಾನಗಳ ಹಾರಾಟ ಸ್ಥಗಿತಗೊಂಡಿತು. 31 ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಯಿತು. ಮೆಟ್ರೊ, ರೈಲು ಸಂಚಾರ ಕೂಡ ಸ್ಥಗಿತವಾಗಿತ್ತು. ನವರಾತ್ರಿಯ ಸಂದರ್ಭವಾಗಿದ್ದರಿಂದ ನಗರವು ದುರ್ಗಾ ಪೂಜೆಯ ಸಿದ್ಧತೆಯಲ್ಲಿತ್ತು. ದುರ್ಗಾ ಪೆಂಡಾಲ್‌ಗಳ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಈ ಸ್ಥಳಗಳೂ ನೀರಿನಲ್ಲಿ ಆವೃತವಾಗಿವೆ. ನವರಾತ್ರಿಯ ಪ್ರಯುಕ್ತ ಸೆ. 26ರಿಂದ ಶಾಲೆಗಳಿಗೆ ರಜೆ ನೀಡಲಾಗಿತ್ತು. ಆದರೆ, ಮಳೆಯ ಕಾರಣ ಎರಡು ದಿನ ಮುನ್ನವೇ ರಜೆ ಘೋಷಿಸಲಾಗಿದೆ.
‘ಅರ್ಧ ಶತಮಾನದಲ್ಲಿ 3ನೇ ಅತಿ ದೊಡ್ಡ ಪ್ರಮಾಣದ ಮಳೆ’ ಕೋಲ್ಕತ್ತ ಇತಿಹಾಸದ ಅರ್ಧ ಶತಮಾನದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಇದು ಮೂರನೇ ಬಾರಿಗೆ ಅತಿ ಹೆಚ್ಚು ಪ್ರಮಾಣದಲ್ಲಿ ಮಳೆ ಸುರಿದಿದೆ. 1978ರಲ್ಲಿ ನಗರದಲ್ಲಿ 36.9 ಸೆಂ.ಮೀ ಮತ್ತು 1986ರಲ್ಲಿ 25.9 ಸೆಂ.ಮೀ ಮಳೆ ಸುರಿದಿತ್ತು. ಬಂಗಾಳ ಕೊಲ್ಲಿಯ ಈಶಾನ್ಯ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆಭಾರತೀಯ ಹವಾಮಾನ ಇಲಾಖೆ
‘ಸಾವುಗಳಿಗೆ ಸಿಇಎಸ್‌ಇ ಜವಾಬ್ದಾರ’ ಕೋಲ್ಕತ್ತದ ವಿದ್ಯುತ್ ಸರಬರಾಜನ್ನು ‘ಸಿಇಎಸ್ಇ’ ಎಂಬ ಖಾಸಗಿ ಕಂಪನಿ ನಿರ್ವಹಿಸುತ್ತದೆ. ಇದು ನಮ್ಮ ಜವಾಬ್ದಾರಿಯಲ್ಲ. ಈ ಸಾವುಗಳಿಗೆ ಆ ಕಂಪನಿಯ ಬೇಜವಾಬ್ದಾರಿತನವೇ ಕಾರಣ. ಮೃತರ ಕುಟುಂಬಗಳಿಗೆ ಈ ಕಂಪನಿಯೇ ಉದ್ಯೋಗ ನೀಡಬೇಕು. ಅವರು ಇಲ್ಲಿ ವ್ಯವಹಾರ ಮಾಡುತ್ತಾರೆ. ಆದರೆ ವ್ಯವಸ್ಥೆಯನ್ನು ಆಧುನಿಕಗೊಳಿಸಲು ಆಗುವುದಿಲ್ಲವೇ? ಜೋತು ಬಿದ್ದ ಸುರಕ್ಷಿತವಲ್ಲದ ವಿದ್ಯುತ್ ತಂತಿಗಳನ್ನು ತಕ್ಷಣವೇ ದುರಸ್ಥಿ ಮಾಡಬೇಕು. ಜಿಎಸ್‌ಟಿ ಹೆಸರಿನಲ್ಲಿ ಕೇಂದ್ರ ಸರ್ಕಾರವು ನಮ್ಮಿಂದ ಹಣ ಕಿತ್ತುಕೊಳ್ಳುತ್ತದೆ. ಉಳಿದ ಹಣವನ್ನು ಇಂಥ ವಿಪತ್ತಿನ ಸಂದರ್ಭಕ್ಕೆ ಬಳಸಿಕೊಳ್ಳುವುದರಲ್ಲಿಯೇ ಸಂಪನ್ಮೂಲ ಮುಗಿದು ಹೋಗುತ್ತಿದೆಮಮತಾ ಬ್ಯಾನರ್ಜಿ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.