ADVERTISEMENT

ಕೊರೆಗಾಂವ್‌–ಭೀಮಾ ಪ್ರಕರಣ: ಮೂವರ ಜಾಮೀನು ಅರ್ಜಿ ತಿರಸ್ಕೃತ

ಸಾಮಾಜಿಕ ಕಾರ್ಯಕರ್ತರು ಸಿಪಿಐ(ಮಾವೋವಾದಿ) ಸಂಘಟನೆ ಸಕ್ರಿಯ ಕಾರ್ಯಕರ್ತರು: ಬಾಂಬೆ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 17:58 IST
Last Updated 15 ಅಕ್ಟೋಬರ್ 2019, 17:58 IST

ಮುಂಬೈ: ಭೀಮಾ ಕೋರೆಗಾಂವ್‌ ಹಿಂಸಾಚಾರ ಪ‍್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸಾಮಾಜಿಕ ಕಾರ್ಯಕರ್ತರಾದ ಸುಧಾ ಭಾರದ್ವಾಜ್‌, ಅರುಣ್‌ ಫೆರೇರಾ, ವರ್ನನ್‌ ಗೊನ್ಸಾಲ್ವೆಸ್‌ ಅವರಿಗೆ ಜಾಮೀನು ನೀಡಲು ಬಾಂಬೆ ಹೈಕೋರ್ಟ್‌ ಮಂಗಳವಾರ ನಿರಾಕರಿಸಿದೆ.

ಈ ಮೂವರು ನಿಷೇಧಿತ ಸಿಪಿಐ(ಮಾವೋವಾದಿ) ಸಂಘಟನೆಯ ಹಿರಿಯ ಸದಸ್ಯರಾಗಿದ್ದಾರೆ. ಜತೆಗೆ, ಸಂಘಟನೆಯ ಬೆಳವಣಿಗೆಗೆ ಹಣ ಸಂಗ್ರಹಿಸಿದ್ದಾರೆ ಮತ್ತು ಕಾರ್ಯಕರ್ತರನ್ನು ನೇಮಿಸಿಕೊಂಡಿದ್ದಾರೆ ಎಂದು ನ್ಯಾಯಾಲಯ ನೀಡಿರುವ ಆದೇಶದಲ್ಲಿ ತಿಳಿಸಿದೆ.

ಮೂವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಸಾರಂಗ್‌ ಕೊತ್ವಾಲ್‌ ತಿರಸ್ಕರಿಸಿದ್ದಾರೆ

ADVERTISEMENT

ಭೀಮಾ ಕೋರೆಗಾಂವ್‌ನಲ್ಲಿ 2017ರ ಡಿಸೆಂಬರ್‌ 31ರಂದು ಆಯೋಜಿಸಿದ್ದ ಕಾರ್ಯಕ್ರಮದ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಮೂವರು ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಮಾವೊವಾದಿಗಳ ಜತೆಗೂ ಇವರ ಸಂಪರ್ಕವಿದ್ದು, ಸರ್ಕಾರವನ್ನು ಉರುಳಿಸುವ ಪ್ರಯತ್ನ ಕೈಗೊಂಡಿದ್ದರು ಎಂದು ಪೊಲೀಸರು ಆರೋಪಿಸಿದ್ದರು.

ಕಳೆದ ವರ್ಷ ಆಗಸ್ಟ್‌ನಲ್ಲಿ ಮೂವರನ್ನು ಗೃಹಬಂಧನದಲ್ಲಿರಿಸಲಾಗಿತ್ತು. ಬಳಿಕ, ಪುಣೆಯ ಸೆಷನ್ಸ್‌ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿದ್ದರಿಂದ ಅಕ್ಟೋಬರ್‌ 26ರಂದು ಪೊಲೀಸ್‌ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಅಂದಿನಿಂದ ಜೈಲಿನಲ್ಲಿರುವ ಸಾಮಾಜಿಕ ಕಾರ್ಯಕರ್ತರು ಕಳೆದ ವರ್ಷ ಬಾಂಬೆ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು.

’2017ರ ಡಿಸೆಂಬರ್‌ 31ರಂದು ಆಯೋಜಿಸಿದ್ದ ಕಾರ್ಯಕ್ರಮದ ಉದ್ದೇಶ ಮತ್ತು ಪರಿಣಾಮಗಳಿಗೆ ಹಾಗೂ ಹಿಂಸಾಚಾರಕ್ಕೆ ಮಾತ್ರ ತನಿಖೆಯು ಸೀಮಿತವಾಗಿಲ್ಲ. ಜನಸಮೂಹವನ್ನು ಒಗ್ಗೂಡಿಸಿ ಶಸ್ತ್ರಸಜ್ಜಿತ ಕ್ರಾಂತಿ ಕೈಗೊಳ್ಳುವ ಮೂಲಕ ರಾಜಕೀಯ ಅಧಿಕಾರ ಪಡೆಯುವ ಸಂಚು ಬಯಲು ಮಾಡುವ ಉದ್ದೇಶದಿಂದ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ’ ಎಂದು ನ್ಯಾಯಾಲಯ ಹೇಳಿದೆ.

‘ನಿಷೇಧಿತ ಸಂಘಟನೆಗಾಗಿ ಹಣ ಸಂಗ್ರಹಿಸುವುದು, ನಿರ್ವಹಣೆ ಮಾಡುವುದು ಮತ್ತು ವಿತರಿಸುವ ಕಾರ್ಯವನ್ನು ಫೆರೇರಾ ಕೈಗೊಂಡಿದ್ದರು. ಅವರ ಈ ಕಾರ್ಯವನ್ನು ಸಂಘಟನೆಯು ಶ್ಲಾಘಿಸಿತ್ತು. ಕೆಲವು ಸಂದರ್ಭಗಳಲ್ಲಿ ನಿರ್ದಿಷ್ಟ ಸೂಚನೆಗಳನ್ನು ಸಹ ನೀಡಲಾಗುತ್ತಿತ್ತು. ಈ ಎಲ್ಲ ಅಂಶಗಳು ಅರ್ಜಿದಾರರು ನಿಷೇಧಿತ ಸಂಘಟನೆಯ ಸಕ್ರಿಯ ಸದಸ್ಯರು ಎನ್ನುವುದನ್ನು ತೋರಿಸುತ್ತದೆ’ ಎಂದು ನ್ಯಾಯಾಲಯ ಹೇಳಿದೆ.

’ತಮಗೆ ವಹಿಸಿದ್ದ ಜವಾಬ್ದಾರಿಯನ್ನು ಫೆರೇರಾ ಸಂಪೂರ್ಣವಾಗಿ ನಿರ್ವಹಿಸಿದ್ದರು ಎನ್ನುವುದನ್ನು ಆರೋಪಪಟ್ಟಿಯಲ್ಲಿನ ವಿಷಯಗಳು ಮೇಲ್ನೋಟಕ್ಕೆ ಸಾಬೀತುಪಡಿಸುತ್ತವೆ. ಗೊನ್ಸಾಲ್ವೆಸ್‌ ಸಹ ಸಂಘಟನೆ ಸೂಚನೆ ಮೇರೆಗೆ ಟಾಟಾ ಸಮಾಜ ವಿಜ್ಞಾನ ಸಂಸ್ಥೆ ಸೇರಿದಂತೆ ಹಲವು ಸಂಸ್ಥೆಗಳಲ್ಲಿರುವವರನ್ನು ಕಾರ್ಯಕರ್ತರನ್ನಾಗಿ ನೇಮಿಸಿಕೊಳ್ಳುತ್ತಿದ್ದರು ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳು ಮೇಲ್ನೋಟಕ್ಕೆ ದೊರೆತಿವೆ’ ಎಂದು ನ್ಯಾಯಾಲಯ ಹೇಳಿದೆ.

ಗೌತಮ್‌ ನವಲಖಾ ಬಂಧನ ಸದ್ಯಕ್ಕಿಲ್ಲ
ನವದೆಹಲಿ: ಭೀಮಾ ಕೋರೆಗಾಂವ್‌ ಹಿಂಸಾಚಾರ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಇನ್ನೊಬ್ಬ ಸಾಮಾಜಿಕ ಕಾರ್ಯಕರ್ತ ಗೌತಮ್‌ ನವಲಖಾ ಅವರನ್ನು ಇನ್ನೂ ನಾಲ್ಕು ವಾರಗಳ ಕಾಲ ಬಂಧಿಸದಂತೆ ಸುಪ್ರೀಂ ಕೋರ್ಟ್‌ ಮಧ್ಯಂತರ ರಕ್ಷಣೆ ನೀಡಿದೆ.

ಆದರೆ, ಬಂಧನ ಪೂರ್ವ ಜಾಮೀನು ಪಡೆಯಲು ಸಂಬಂಧಿಸಿದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆಯೂ ಗೌತಮ್‌ ಅವರಿಗೆ ಸೂಚಿಸಲಾಗಿದೆ.

ಮಧ್ಯಂತರ ರಕ್ಷಣೆಗೆ ಮಹಾರಾಷ್ಟ್ರ ಸರ್ಕಾರದ ವಕೀಲರು ಆಕ್ಷೇಪ ವ್ಯಕ್ತಪಡಿಸಿದಾಗ ಪ್ರತಿಕ್ರಿಯಿಸಿದ ನ್ಯಾಯಾಲಯವು, ‘ಒಂದು ವರ್ಷವಾದರೂ ಇದುವರೆಗೆ ಗೌತಮ್‌ ಅವರ ವಿಚಾರಣೆಯನ್ನು ಏಕೆ ನಡೆಸಿಲ್ಲ’ ಎಂದು ಪ್ರಶ್ನಿಸಿದರು.

ಗೌತಮ್‌ ವಿರುದ್ಧ ಆರೋಪಪಟ್ಟಿ ಸಲ್ಲಿಸಿಲ್ಲ ಎಂದು ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.