ADVERTISEMENT

ಜಗಳೂರಿನ ಬಾಲಕ ಸಿ.ಡಿ.ಕೃಷ್ಣಾನಾಯ್ಕನಿಗೆ ಶೌರ್ಯಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 20:16 IST
Last Updated 18 ಜನವರಿ 2019, 20:16 IST
.
.   

ನವದೆಹಲಿ:ಶಿವಮೊಗ್ಗದಲ್ಲಿ ಓದುತ್ತಿರುವ ದಾವಣಗೆರೆ ಜಿಲ್ಲೆಯ ಜಗಳೂರಿನ ಸಿ.ಡಿ.ಕೃಷ್ಣಾನಾಯ್ಕ ಈ ಬಾರಿಯ ರಾಷ್ಟ್ರೀಯ ಮಕ್ಕಳ ಶೌರ್ಯಪ್ರಶಸ್ತಿಗೆ ಆಯ್ಕೆಯಾಗಿರುವ ರಾಜ್ಯದ ಏಕೈಕ ಬಾಲಕ.

2017ರ ಸೆಪ್ಟಂಬರ್‌23ರಂದು ಶಿವಮೊಗ್ಗದ ತ್ರಿಮೂರ್ತಿ ನಗರದ ಬಳಿಯ ತುಂಗಾ ನೀರಾವರಿ ಕಾಲುವೆಗೆ ಜಾರಿ ಬಿದ್ದು ಮುಳುಗತೊಡಗಿದ್ದ ಇಬ್ಬರು ಚಿಣ್ಣರ ಪೈಕಿ ಒಬ್ಬನನ್ನು ಕಾಪಾಡಿದ ಸಾಹಸಿ ಕೃಷ್ಣಾನಾಯ್ಕ ಒಂಬತ್ತನೆಯ ತರಗತಿಯ ವಿದ್ಯಾರ್ಥಿ. ಸೈಕಲ್ ತುಳಿದುಕೊಂಡು ಮಾರುಕಟ್ಟೆಗೆ ಹೊರಟಿದ್ದ ಈತನ ಕಣ್ಣಿಗೆ ನೀರಲ್ಲಿ ಮುಳುಗುತ್ತಿದ್ದ ಎಂಟು-ಹತ್ತು ವರ್ಷ ವಯಸ್ಸಿನ ಇಬ್ಬರು ಬಾಲಕರು ಕಂಡರು.

‘ಥರ್ಮೋಕಾಲ್ ಹಿಡಿದು ತೇಲುವ ಆಟ ಆಡುತ್ತಿದ್ದ ಬಾಲಕರ ಕೈಯಿಂದ ಬೆಂಡು ಪದಾರ್ಥ ಜಾರಿತ್ತು.ನಾನು ಹತ್ತಡಿ ಆಳದ ನೀರಿಗೆ ಜಿಗಿದು ಇಬ್ಬರನ್ನೂ ಹಿಡಿದು ದಡಕ್ಕೆ ತರತೊಡಗಿದ್ದೆ.ವೇಗವಾಗಿ ಹರಿಯುತ್ತಿದ್ದ ನೀರಿನಲ್ಲಿ ಬಲವಾದ ಸೆಳವಿತ್ತು.ಒಬ್ಬ ಬಾಲಕನನ್ನು ಮಾತ್ರ ಕಾಪಾಡಿದೆ.ಮತ್ತೊಬ್ಬ ಕೊಚ್ಚಿ ಹೋದ’ ಎಂದು ಕೃಷ್ಣಾನಾಯ್ಕ 'ಪ್ರಜಾವಾಣಿ'ಯೊಂದಿಗೆ ತನ್ನ ಅಂದಿನ ಅನುಭವವನ್ನು ನೆನಪು ಮಾಡಿಕೊಂಡ.

ADVERTISEMENT

ಪ್ರಾಣ ಉಳಿಸುವಲ್ಲಿ ತೋರಿದ ಸಾಹಸ ಮತ್ತು ಸಮಯಪ್ರಜ್ಞೆಯನ್ನು ಮೆಚ್ಚಿ 2018ರ ಸಾಲಿನ ರಾಷ್ಟ್ರೀಯ ಮಕ್ಕಳ ಕಲ್ಯಾಣ ಸಮಿತಿಯ ರಾಷ್ಟ್ರೀಯ ಶೌರ್ಯಪ್ರಶಸ್ತಿಗೆ ಈತನನ್ನು ಆಯ್ಕೆ ಮಾಡಲಾಗಿದೆ.ಒಟ್ಟು 14 ರಾಜ್ಯಗಳ 21 ಮಕ್ಕಳು ಕೃಷ್ಣಾನಾಯ್ಕನೊಂದಿಗೆ ಶೌರ್ಯಪ್ರಶಸ್ತಿಗಳನ್ನು ಪಡೆಯಲಿದ್ದಾರೆ. ಸ್ಥಿತಿವಂತರೇನೂ ಅಲ್ಲದ ತಂದೆ ತಾಯಿಗಳ ನಾಲ್ಕನೆಯ ಮಗನಾದ ನಾಯ್ಕನ ಸದ್ಯದ ದೊಡ್ಡ ಕನಸು ರೈಲು ಚಾಲಕನಾಗುವುದು.ಈ ಕನಸು ನನಸು ಮಾಡಿಕೊಳ್ಳಲು ಏನು ಓದಬೇಕು ಎಂಬುದನ್ನೂ ಅರಿತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.