ADVERTISEMENT

ಅಲ್ಪಸಂಖ್ಯಾತರ ಘೋಷಣೆ: ಯಥಾಸ್ಥಿತಿ ಕಾಪಾಡಿಕೊಂಡ ರಾಜ್ಯ

​ಪ್ರಜಾವಾಣಿ ವಾರ್ತೆ
Published 14 ಜನವರಿ 2023, 16:06 IST
Last Updated 14 ಜನವರಿ 2023, 16:06 IST

ನವದೆಹಲಿ: ನಿರ್ದಿಷ್ಟ ಸಮುದಾಯವನ್ನು ಅಲ್ಪಸಂಖ್ಯಾತ ಸಮುದಾಯ ಎಂದು ಘೋಷಿಸುವ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವುದಾಗಿ ಹೇಳಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಈ ವಿಷಯದ ಕುರಿತು ಬಾಕಿ ಇರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಸಂಬಂಧಿಸಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರತಿಕ್ರಿಯೆ ನೀಡಬೇಕು ಎಂದು ಕೇಂದ್ರವು ಹೇಳಿತ್ತು. ಅದರಂತೆ ಕರ್ನಾಟಕವು ತನ್ನ ನಿಲುವನ್ನು ವ್ಯಕ್ತಪಡಿಸಿದೆ.

‘ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಾಯ್ದೆ, 1994ರ ಸೆಕ್ಷನ್ 10 (ಬಿ)ನಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವು ಕರ್ನಾಟಕ ಸರ್ಕಾರಕ್ಕೆ ಮುಸ್ಲಿಂ, ಕ್ರೈಸ್ತ, ಸಿಖ್‌, ಬೌದ್ಧ, ಜೈನ ಹಾಗೂ ಪಾರ್ಸಿ ಸಮುದಾಯಗಳನ್ನು ಅಲ್ಪಸಂಖ್ಯಾತ ಸಮುದಾಯಗಳನ್ನಾಗಿ ಘೋಷಿಸಲು ಶಿಫಾರಸು ಮಾಡಿದೆ. ಅದರಂತೆ, ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಸಚಿವಾಲಯವು ಸದರಿ ಕಾಯ್ದೆಯ ಸೆಕ್ಷನ್ 2 (ಡಿ) ಅಡಿಯಲ್ಲಿ ಆ ಸಮುದಾಯಗಳನ್ನು ಅಲ್ಪಸಂಖ್ಯಾತ ಸಮುದಾಯಗಳೆಂದು ಘೋಷಿಸಿದೆ. ಈ ವಿಷಯದಲ್ಲಿ ಕರ್ನಾಟಕ ರಾಜ್ಯದ ನಿಲುವು ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವುದಾಗಿದೆ’ ಎಂದು ಹೇಳಿದೆ.

ADVERTISEMENT

ಸಮುದಾಯಗಳನ್ನು ಅಲ್ಪಸಂಖ್ಯಾತ ಎಂದು ಘೋಷಿಸುವ ಅಧಿಕಾರವನ್ನು ರಾಷ್ಟ್ರಮಟ್ಟದ ಬದಲಿಗೆ ಜಿಲ್ಲೆ ಅಥವಾ ರಾಜ್ಯಗಳಿಗೆ ನೀಡಲು ನಿರ್ದೇಶನ ನೀಡಬೇಕೆಂದು ಕೋರಿ ವಕೀಲರಾದ ಅಶ್ವಿನಿ ಕುಮಾರ್ ಉಪಾಧ್ಯಾಯ ಸೇರಿದಂತೆ ಇತರರು ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಪ್ರತಿಕ್ರಿಯೆಯನ್ನು ನೀಡಿವೆ.

ಆದರೆ, ದೆಹಲಿ ಮಾತ್ರ ಹಿಂದೂಗಳಿಗೆ ಯಾವುದೇ ರೂಪದಲ್ಲಿ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡುವುದನ್ನು ಬಹಿರಂಗವಾಗಿ ಬೆಂಬಲಿಸಿದೆ. ‘ತಮ್ಮ ಮೂಲ ರಾಜ್ಯದಲ್ಲಿ (ಜಮ್ಮು– ಕಾಶ್ಮೀರ, ಲಡಾಖ್ ಇತ್ಯಾದಿ) ಧಾರ್ಮಿಕ ಅಲ್ಪಸಂಖ್ಯಾತರಾಗಿರುವ ಹಿಂದೂ ಧರ್ಮದ ಅನುಯಾಯಿಗಳಿಗೆ ವಲಸಿಗ ಅಲ್ಪಸಂಖ್ಯಾತ ಸ್ಥಾನಮಾನವನ್ನು ಕೇಂದ್ರ ಸರ್ಕಾರವು ಘೋಷಿಸಬಹುದು ಎಂದೂ ದೆಹಲಿ ತಿಳಿಸಿದೆ.

ಆಂಧ್ರಪ್ರದೇಶ, ಅಸ್ಸಾಂ, ತಮಿಳುನಾಡು, ಪಂಜಾಬ್ ಸೇರಿದಂತೆ ಇತರ ಕೆಲವು ರಾಜ್ಯಗಳು ರಾಜ್ಯಮಟ್ಟದಲ್ಲಿಯೇ ಅಲ್ಪಸಂಖ್ಯಾತ ಸಮುದಾಯವನ್ನು ಗುರುತಿಸಲು ಒಲವು ತೋರಿದವು. ಆದರೆ, ಯಾವುದೇ ನಿರ್ದಿಷ್ಟ ಸಮುದಾಯವನ್ನು ಹೆಸರಿಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.