ಕಾಂಗ್‌ಪೋಕ್ಪಿ(ಮಣಿಪುರ): ಜನಾಂಗೀಯ ಸಂಘರ್ಷಕ್ಕೆ ಸುದ್ದಿಯಾಗುತ್ತಿದ್ದ ಮಣಿಪುರದಲ್ಲಿ ಮಾನವೀಯ ಮೌಲ್ಯ ಎತ್ತಿಹಿಡಿಯುವ ಘಟನೆಯೊಂದು ನಡೆದಿದೆ.
ಅಪಘಾತದಲ್ಲಿ ಗಾಯಗೊಂಡಿದ್ದ ಮೈತೇಯಿ ಸಮುದಾಯದ ಲಾರಿ ಚಾಲಕನಿಗೆ ಕುಕಿ ಸಮುದಾಯದವರು ಸಹಾಯಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆದಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಶುಕ್ರವಾರ ಮಧ್ಯಾಹ್ನ 3 ಗಂಟೆಯ ವೇಳೆ ತರಕಾರಿ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 2ರಲ್ಲಿ ಕುಕಿ ಪ್ರಾಬಲ್ಯದ ಪ್ರದೇಶವಾದ ಕೀಥೆಲ್‌ಮಾನ್ಬಿ ಮಿಲಿಟರಿ ಕಾಲೋನಿ ಸಮೀಪ ಪಲ್ಟಿಯಾಗಿತ್ತು.
ಅಪಘಾತದಲ್ಲಿ ಲಾರಿ ಚಾಲಕ ಹೇಮಮ್ ಪ್ರೇಮ್ ಸಿಂಗ್(36) ಗಂಭೀರವಾಗಿ ಗಾಯಗೊಂಡಿದ್ದು, ತರಕಾರಿ ಚೀಲಗಳ ನಡುವೆ ಸಿಲುಕಿದ್ದರು ಎಂದು ಸ್ಥಳೀಯರು ಸುದ್ದಿಗಾರರಿಗೆ ಹೇಳಿದ್ದಾರೆ.
ಈ ವೇಳೆ, ಗಾಯಗೊಂಡ ಚಾಲಕನಿಗೆ ಸಹಾಯ ಮಾಡಲು ಕುಕಿ ಸಮುದಾಯದ ಸದಸ್ಯರೊಬ್ಬರು ಮುಂದೆ ಬಂದಿದ್ದಾರೆ. ತರಕಾರಿ ಚೀಲಗಳ ಅಡಿ ಸಿಲುಕಿದ್ದ ಅವರನ್ನು ಹೊರ ತರುವ ಮೂಲಕ ಅವರ ಪ್ರಾಣ ಉಳಿಸಿದ್ದಾರೆ.
ತಕ್ಷಣ ಅಲ್ಲಿಗೆ ಧಾವಿಸಿದ ಗಡಿ ಭದ್ರತಾ ಪಡೆ ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಸುಮಾರು ಎರಡು ವರ್ಷಗಳಿಂದ ಜನಾಂಗೀಯ ಹಿಂಸಾಚಾರ ಪ್ರಾರಂಭವಾದಾಗಿನಿಂದ ,ಮೈತೇಯಿ ಪ್ರಾಬಲ್ಯವಿರುವ ಇಂಫಾಲ್ ಕಣಿವೆಗೆ ಕುಕಿಗಳು ಮತ್ತು ಕುಕಿ ಪ್ರಾಬಲ್ಯವಿರುವ ಗುಡ್ಡಗಾಡು ಪ್ರದೇಶಗಳಿಗೆ ಮೈತೇಯಿಗಳು ಸುರಕ್ಷತಾ ದೃಷ್ಟಿಯಿಂದ ಹೋಗುತ್ತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.