
ಕರ್ನೂಲ್: ಬೈಕ್ ಸವಾರ ಶಿವಶಂಕರ್ ಅನುಮಾನಾಸ್ಪದ ನಡವಳಿಕೆ ಸೆರೆಯಾಗಿರುವ ವಿಡಿಯೊ ವ್ಯಾಪಕವಾಗಿ ಹರಿದಾಡಿದ್ದು, ಅವರು ಮದ್ಯ ಸೇವಿಸಿದ್ದರೇ ಎಂಬ ಶಂಕೆ ಮೂಡಿದೆ ಎಂದು ಪೊಲೀಸರು ಹೇಳಿದ್ದಾರೆ.
‘ಪೆಟ್ರೋಲ್ ಬಂಕ್‌ನಲ್ಲಿ ಶಿವಶಂಕರ್ ಬೈಕ್ ನಿಲ್ಲಿಸಿ ಸಿಬ್ಬಂದಿಗಾಗಿ ಹುಡುಕಾಡಿ, ಸಿಡಿಮಿಡಿಗೊಂಡಿದ್ದರು. ಇದೇ ವೇಳೆ ಕಿರುಚಾಡುತ್ತಾ ಬೈಕ್ ಅನ್ನು ಸೈಡ್ ಸ್ಟ್ಯಾಂಡ್‌ನಿಂದಲೇ ಮತ್ತೊಂದು ಬದಿಗೆ ತಿರುಗಿಸಿ, ಮುಂದೆ ಸಾಗುವಾಗ ಸಮತೋಲನ ಕಾಯ್ದುಕೊಳ್ಳಲು ಹೆಣಗಾಡಿದ್ದ ದೃಶ್ಯಗಳೂ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ’ ಎಂದು ಅವರು ತಿಳಿಸಿದ್ದಾರೆ.
ಈ ದೃಶ್ಯಾವಳಿಗಳನ್ನು ಆಧರಿಸಿ, ಸವಾರ ಮದ್ಯ ಅಥವಾ ಇತರ ವಸ್ತುಗಳ ಸೇವಿಸಿ ಬೈಕ್ ಚಲಾಯಿಸರಬಹುದೇ ಎಂದು ಪೊಲೀಸರು ಶಂಕಿಸಿದ್ದಾರೆ. ಇದನ್ನು ದೃಢಪಡಿಸಿಕೊಳ್ಳಲು ಬೈಕ್ ಸವಾರನ ಮೃತದೇಹದ ಒಳಾಂಗಗಳ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಏತನ್ಮಧ್ಯೆ, ಶಂಕರ್ ಜೊತೆ ಬೈಕ್‌ನಲ್ಲಿದ್ದ ಹಿಂಬದಿ ಸವಾರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ವಿ.ಕಾವೇರಿ ಟ್ರಾವೆಲ್ಸ್‌ಗೆ ಸೇರಿದ ಬಸ್ಸು ಕರ್ನೂಲ್ ಜಿಲ್ಲೆಯ ಚಿನ್ನತೇಕೂರು ಗ್ರಾಮದ ಬಳಿ ಬೈಕ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದಿತ್ತು. ಘಟನೆಯಲ್ಲಿ ಬಸ್‌ನಲ್ಲಿದ್ದ 44 ಜನರ ಪೈಕಿ 19 ಜನರು ಸಜೀವ ದಹನಗೊಂಡಿದ್ದರು. ಬೈಕ್ ಸವಾರನು ಮೃತಪಟ್ಟಿದ್ದನು.
ಬಸ್ ಅಡಿ ಸಿಲುಕಿದ್ದ ಬೈಕ್‌ನ ಇಂಧನ ಟ್ಯಾಂಕ್ ಸ್ಟೋಟಗೊಂಡು ಬೆಂಕಿ ಹೊತ್ತಿರಬಹುದು ಎಂದು ಶಂಕಿಸಲಾಗಿದೆ. ಘಟನೆ ಸಂಬಂಧ ಬಸ್ ಚಾಲಕ ಮತ್ತು ಸಹ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.