ADVERTISEMENT

ಕುವೈತ್‌ನಲ್ಲಿ ಬಂಧಿಯಾಗಿದ್ದ ಮಹಿಳೆಯ ರಕ್ಷಣೆ

ಮಂಗಳೂರಿನ ಅನಿವಾಸಿ ಉದ್ಯಮಿಗಳಿಂದ ನೆರವು

​ಪ್ರಜಾವಾಣಿ ವಾರ್ತೆ
Published 4 ಜುಲೈ 2019, 16:10 IST
Last Updated 4 ಜುಲೈ 2019, 16:10 IST
   

ಮಂಗಳೂರು: ದಲ್ಲಾಳಿಗಳಿಂದ ವಂಚನೆಗೊಳಗಾಗಿ ಕುವೈತ್‌ನಲ್ಲಿ ಜೀತದಾಳುವಿನಂತೆ ಬಂದಿಯಾಗಿದ್ದ ಇಲ್ಲಿನ ಬೆಂಗರೆಯ ಸ್ಯಾಂಡ್‌ಪಿಟ್‌ ನಿವಾಸಿ ರೇಷ್ಮಾ ಸುವರ್ಣ ಎಂಬ ಮಹಿಳೆಯನ್ನು ಮಾಲೀಕರ ಹಿಡಿತದಿಂದ ರಕ್ಷಿಸಿರುವ ಅನಿವಾಸಿ ಭಾರತೀಯ ಉದ್ಯಮಿಗಳು, ಸಂತ್ರಸ್ತೆಯನ್ನು ಭಾರತೀಯ ರಾಯಭಾರ ಕಚೇರಿಗೆ ತಲುಪಿಸಿದ್ದಾರೆ.

ಮನೆಗೆಲಸಕ್ಕಿರುವ ಸ್ಥಳದಲ್ಲಿ ದೌರ್ಜನ್ಯ ನಡೆಯುತ್ತಿರುವುದು ಮತ್ತು ಊರಿಗೆ ಮರಳಲಾಗದೇ ಸಂಕಷ್ಟ ಎದುರಿಸುತ್ತಿರುವ ಕುರಿತು ರೇಷ್ಮಾ ಅವರು ವಾಟ್ಸ್‌ ಆ್ಯಪ್‌ ಮೂಲಕ ಧ್ವನಿ ಸಂದೇಶ ರವಾನಿಸಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಬುಧವಾರ ಈ ಸಂದೇಶ ವೈರಲ್‌ ಆಗಿತ್ತು. ತಕ್ಷಣದಿಂದಲೇ ಕಾರ್ಯಾಚರಣೆ ಆರಂಭಿಸಿದ ಕುವೈತ್‌ನಲ್ಲಿರುವ ಅನಿವಾಸಿ ಮಂಗಳೂರು ಉದ್ಯಮಿಗಳು ಗುರುವಾರ ಮಹಿಳೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜನವರಿಯಲ್ಲಿ ಪತಿ ಸಚಿನ್‌ ಜೊತೆ ರೇಷ್ಮಾ ಕುವೈತ್‌ಗೆ ತೆರಳಿದ್ದರು. ಇಬ್ಬರೂ ಬೇರೆ ಬೇರೆ ಕಡೆ ಕೆಲಸ ಮಾಡುತ್ತಿದ್ದರು. ಕೆಲವು ದಿನಗಳ ಬಳಿಕ ಪತಿ ಮೃತಪಟ್ಟಿದ್ದರು. ಪತಿಯ ಶವಸಂಸ್ಕಾರಕ್ಕೆ ಬರುವುದಕ್ಕೂ ಮಾಲೀಕರು ಅವಕಾಶ ನೀಡಿರಲಿಲ್ಲ. ಕುಟುಂಬದವರನ್ನು ಸಂಪರ್ಕಿಸಲು ಬಿಡುತ್ತಿರಲಿಲ್ಲ. ನಿತ್ಯವೂ ಹಲ್ಲೆ ನಡೆಸುತ್ತಿದ್ದಾರೆ ಎಂದು ಸಂದೇಶದಲ್ಲಿ ದೂರಿದ್ದರು.

ADVERTISEMENT

ಕುವೈತ್‌ನಲ್ಲಿ ಉದ್ಯಮಿಗಳಾಗಿರುವ ಮೋಹನ್‌ ದಾಸ್‌ ಕಾಮತ್‌, ರಾಜ್‌ ಭಂಡಾರಿ, ಮಾಧವ ನಾಯಕ್‌ ಮತ್ತು ದಿನೇಶ್‌ ಸುವರ್ಣ ಮಹಿಳೆಯ ರಕ್ಷಣೆಗೆ ಯೋಜನೆ ರೂಪಿಸಿದ್ದರು. ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಎರಡನೇ ಕಾರ್ಯದರ್ಶಿ ಸಿಬಿ ಯು.ಎಸ್‌. ನೆರವು ನೀಡಿದ್ದರು.

‘ಘನತ್ಯಾಜ್ಯ ಹೊರಕ್ಕೆ ಎಸೆಯಲು ಬಂದಾಗ ಟ್ಯಾಕ್ಸಿ ಹತ್ತಿಕೊಂಡು ರಾಯಭಾರ ಕಚೇರಿಗೆ ಬರುವಂತೆ ರೇಷ್ಮಾ ಅವರಿಗೆ ವಾಟ್ಸ್‌ ಆ್ಯಪ್‌ ಕರೆಮಾಡಿ ತಿಳಿಸಿದ್ದೆವು. ಅವರು ಗುರುವಾರ ಬೆಳಿಗ್ಗೆ ಹೊರ ಬಂದು ಕಾದು ನಿಂತಿದ್ದರು. ಆದರೆ, ಟ್ಯಾಕ್ಸಿ ಸಿಗಲಿಲ್ಲ. ನಂತರ ರಾಜ್‌ ಭಂಡಾರಿ ಮತ್ತು ಮಾಧವ ನಾಯಕ್‌ ವಾಹನದ ವ್ಯವಸ್ಥೆ ಮಾಡಿದರು. ಅವರೇ ಮಹಿಳೆಯನ್ನು ಕರೆತಂದು ರಾಯಭಾರ ಕಚೇರಿಗೆ ತಲುಪಿಸಿದರು’ ಎಂದು ಮೋಹನ್ ದಾಸ್‌ ಕಾಮತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕುವೈತ್‌ಗೆ ಕರೆದೊಯ್ದಿದ್ದ ಮೂಡುಬಿದಿರೆಯ ಜಬ್ಬಾರ್‌ ಮತ್ತು ಕೇರಳದ ಅನ್ವರ್‌ ಎಂಬ ದಲ್ಲಾಳಿಗಳು ತನ್ನನ್ನು 1,000 ದಿರಮ್ಸ್‌ಗೆ ಮನೆಗೆಲಸಕ್ಕೆ ಮಾರಾಟ ಮಾಡಿದ್ದರು ಎಂದು ರೇಷ್ಮಾ ದೂರು ನೀಡಿದ್ದಾರೆ. ಅವರ ಪಾಸ್‌ಪೋರ್ಟ್‌ ದಲ್ಲಾಳಿಗಳ ಬಳಿ ಇದೆ. ರಾಯಭಾರ ಕಚೇರಿಯವರೇ ಅದನ್ನು ತರಿಸಿಕೊಳ್ಳಲಿದ್ದಾರೆ. ಸಾಧ್ಯವಾಗದಿದ್ದರೆ ‘ಔಟ್‌ ಪಾಸ್‌’ ಮೂಲಕ ವಾರದೊಳಗೆ ಮಹಿಳೆಯನ್ನು ಮಂಗಳೂರಿಗೆ ತಲುಪಿಸಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.