ADVERTISEMENT

ರ‍್ಯಾಗಿಂಗ್‌ ಪತ್ತೆಗೆ ವಿದ್ಯಾರ್ಥಿನಿ ವೇಷ ಧರಿಸಿದ ಪೊಲೀಸ್‌!

ಪಿಟಿಐ
Published 12 ಡಿಸೆಂಬರ್ 2022, 11:25 IST
Last Updated 12 ಡಿಸೆಂಬರ್ 2022, 11:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಂದೋರ್‌, ಮಧ್ಯಪ್ರದೇಶ (ಪಿಟಿಐ): ಇಲ್ಲಿನ ಮಹಾತ್ಮ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜಿನಲ್ಲಿ ನಡೆಯುತ್ತಿದ್ದ ರ‍್ಯಾಗಿಂಗ್ ತಡೆಗೆ, 24 ವರ್ಷದ ಮಹಿಳಾ ಪೊಲೀಸ್‌ ಅಧಿಕಾರಿಯೊಬ್ಬರು ವಿದ್ಯಾರ್ಥಿನಿಯಂತೆ ವೇಷ ಧರಿಸಿ ಕಾಲೇಜಿಗೆ ತೆರಳಿ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ರ‍್ಯಾಗಿಂಗ್ ಬಗ್ಗೆ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಸಹಾಯವಾಣಿಯಲ್ಲಿ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಸಂಸ್ಥೆಯ ಆಡಳಿತ ಮಂಡಳಿ ಜುಲೈ 24ರಂದು ಅಪರಿಚಿತ ವಿದ್ಯಾರ್ಥಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿತ್ತು.

ಯುಜಿಸಿಗೆ ನೀಡಿರುವ ದೂರಿನಲ್ಲಿ ರ‍್ಯಾಗಿಂಗ್‌ ಘಟನೆಯ ಪೂರ್ಣ ಮಾಹಿತಿ ನೀಡಲಾಗಿತ್ತು. ಆದರೆ ಆರೋಪಿಗಳ ಹೆಸರು ಮತ್ತು ದೂರುದಾರರ ಹೆಸರನ್ನು ಬಹಿರಂಗಪಡಿಸಿರಲಿಲ್ಲ. ಹೀಗಾಗಿ ಮಹಿಳಾ ಪೊಲೀಸ್‌ ಅಧಿಕಾರಿಯೊಬ್ಬರು ವೈದ್ಯಕೀಯ ವಿದ್ಯಾರ್ಥಿನಿಯಂತೆ ವೇಷ ಧರಿಸಿ ಕಾಲೇಜಿಗೆ ತೆರಳಿ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಈ ಕಾರ್ಯಾಚರಣೆಗೆ ಮತ್ತೊಬ್ಬ ಮಹಿಳಾ ಸಿಬ್ಬಂದಿಯನ್ನು ನರ್ಸ್‌ ವೇಷದಲ್ಲಿ ಮತ್ತು ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಕ್ಯಾಂಟೀನ್‌ ಕೆಲಸಗಾರರ ವೇಷದಲ್ಲಿ ಕಾಲೇಜಿಗೆ ಕಳುಹಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

11 ಮಂದಿ ಆರೋಪಿಗಳ ಪಟ್ಟಿ ಲಭ್ಯವಾಗುತ್ತಿದ್ದಂತೆಯೇ ಕಾಲೇಜು ಆಡಳಿತವು ಅವರನ್ನು ತಕ್ಷಣದಿಂದ ಮೂರು ತಿಂಗಳ ಅವಧಿಗೆ ಅಮಾನತು ಮಾಡಿ ಆದೇಶ ಹೊರಡಿಸಿದೆ.ನೋಟಿಸ್‌ ಕಳುಹಿಸಿ ತನಿಖೆಗೆ ಸಹಕರಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.