ADVERTISEMENT

ಕೆರೆಗಳ ಪುನಶ್ಚೇತನಗೊಳಿಸುವಲ್ಲಿ ವಿಫಲ, ಅಧಿಕಾರಿಗಳಿಗೆ ಜೈಲು ಶಿಕ್ಷೆ: ಎನ್‌ಜಿಟಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 5:41 IST
Last Updated 2 ನವೆಂಬರ್ 2019, 5:41 IST
   

ನವದೆಹಲಿ: ಬೆಂಗಳೂರಿನಲ್ಲಿರುವ ಕೆರೆಗಳನ್ನು ಪುನಶ್ಚೇತನಗೊಳಿಸುವುದಕ್ಕೆ ಸಂಬಂಧಿಸಿದಂತೆ ತನ್ನ ಆದೇಶವನ್ನು ಪಾಲಿಸುವಲ್ಲಿ ಕರ್ನಾಟಕ ಸರ್ಕಾರ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ), ನಿರ್ಲಕ್ಷ್ಯ ತೋರುವ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವುದಾಗಿ ಎಚ್ಚರಿಸಿದೆ.

ಬೆಂಗಳೂರಿನಲ್ಲಿರುವ ಬೆಳ್ಳಂದೂರು, ಅಗರ ಹಾಗೂ ವರ್ತೂರು ಕೆರೆಗಳು ಮಾಲಿನ್ಯಗೊಳ್ಳುತ್ತಿರುವ ಕುರಿತು ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯಲ್‌ ನೇತೃತ್ವದ ಎನ್‌ಜಿಟಿಯ ಪ್ರಧಾನ ಪೀಠ ಹೊರಡಿಸಿರುವ ಆದೇಶದಲ್ಲಿ, ‘ಇದೊಂದು ಸೂಕ್ಷ್ಮ ವಿಚಾರ. ಈ ಕುರಿತು ನ್ಯಾಯಮಂಡಳಿ ಕಟ್ಟುನಿಟ್ಟಿನ ಆದೇಶ ನೀಡಿದ್ದರೂ ಈ ವಿಷಯದಲ್ಲಿ ಕಾಳಜಿ ಇಲ್ಲ ಎಂಬುದನ್ನು ರಾಜ್ಯ ಸರ್ಕಾರ ತೋರಿಸಿಕೊಟ್ಟಿದೆ’ ಎಂದು ಅಭಿಪ್ರಾಯಪಟ್ಟಿದೆ.

‘ಈ ವಿಷಯದ ಮಹತ್ವ ಅರಿಯಲು ಹಾಗೂ ನ್ಯಾಯಮಂಡಳಿ ನೀಡಿದ ಆದೇಶವನ್ನು ಜಾರಿಗೊಳಿಸುವಲ್ಲಿ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆ, ಸಂಸ್ಥೆಗಳು ಸಂಪೂರ್ಣ ವಿಫಲವಾಗಿವೆ. ಹೀಗಾಗಿ ನ. 27ಕ್ಕೆ ನಿಗದಿ ಮಾಡಲಾಗಿರುವ ವಿಚಾರಣೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ನಗರಾಭಿವೃದ್ದಿ ಇಲಾಖೆ), ಬಿಬಿಎಂಪಿ ಹಾಗೂ ಬಿಡಿಎ ಆಯುಕ್ತರು, ಬಿಡಬ್ಲ್ಯುಎಸ್‌ಎಸ್‌ಬಿ ಚೇರಮನ್‌, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಖುದ್ದಾಗಿ ಹಾಜರಾಗಬೇಕು’ ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ADVERTISEMENT

‘ಈ ವರೆಗೆ ಕೈಗೊಂಡ ಕ್ರಮಗಳ ಕುರಿತು ಅನುಪಾಲನಾ ವರದಿ, ನ್ಯಾಯಮಂಡಳಿಯ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ ತಮ್ಮ ವಿರುದ್ಧ ಜೈಲು ಸೇರಿದಂತೆ ಕಠಿಣ ಶಿಕ್ಷೆ ಯಾಕೆ ವಿಧಿಸಬಾರದು ಎಂಬ ಬಗ್ಗೆ ವಿವರಣೆ ಸಹಿತ ಹಾಜರಾಗುವಂತೆಯೂ’ ಆದೇಶದಲ್ಲಿ ತಿಳಿಸಲಾಗಿದೆ.

**

ಬಿಬಿಎಂಪಿ ₹ 25 ಕೋಟಿ ಠೇವಣಿ ಇರಿಸಿಲ್ಲ. ಕಾರ್ಯಾನುಷ್ಠಾನ ಸಂಬಂಧ ₹ 100 ಕೋಟಿ ಮೊತ್ತದ ಖಾತರಿ ನೀಡದಿರುವ ಬಗ್ಗೆ ರಾಜ್ಯ ಸರ್ಕಾರದಿಂದ ಯಾವುದೇ ವಿವರಣೆ ಇಲ್ಲ.
-ರಾಷ್ಟ್ರೀಯ ಹಸಿರು ನ್ಯಾಯಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.